ವರದಿ : ಬಿ.ಎಸ್.ಆಚಾರ್ಯ
ಕುಂದಾಪುರ: ಕುಂದಬಾರಂದಾಡಿ ಗ್ರಾಮದಲ್ಲಿ “ಮುಂಗಾರು ಹಂಗಾಮಿನ ಭತ್ತದ ಗದ್ದೆಯಲ್ಲಿ ಬರುವ ವೌಚೇರಿಯ (ಹಳದಿ ಹಸಿರು ಪಾಚಿ) ಜಾತಿಯ ಕಳೆ ಮತ್ತು ಇತರ ಕಳೆ ಜಾತಿಗಳ ನಿರ್ವಹಣೆ ಕ್ಷೇತ್ರೋತ್ಸವ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ. ಕೆ. ಸಿ ಶಶಿಧರ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಕರಾವಳಿ ಪ್ರದೇಶದಲ್ಲಿ ಭತ್ತದಲ್ಲಿ ಬರುವ ವಿಶೇಷ ಕಳೆ ಹಳದಿ ಹಸಿರು ಪಾಚಿ ಬಗ್ಗೆ ನಮ್ಮ ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರದ ವತಿಯಿಂದ ಎರಡು ವರ್ಷಗಳ ಕಾಲ ಸಂಶೋಧನೆಯನ್ನು ನಡೆಸಿ ಕಳೆಯ ನಿಯಂತ್ರಣಕ್ಕೆ ಶಿಫಾರಸ್ಸು ಮಾಡಿರುವ ಕಳೆ ನಾಶಕವನ್ನು ಈ ದಿನ ಕುಂದಬಾರಂದಾಡಿ ಗ್ರಾಮದಲ್ಲಿ ರೈತರ ಕ್ಷೇತ್ರದಲ್ಲಿ ಮುಂಚೂಣಿ ಪ್ರಾತ್ಯಕ್ಷಿಕೆಯನ್ನು ಕೈಗೊಂಡು ಕಳೆ ನಿಯಂತ್ರಿಸುವಲ್ಲಿ ಯಶಸ್ಸನ್ನು ಕಂಡಿರುತ್ತಾರೆ ಅದಲ್ಲದೇ ಈ ಮಾಹಿತಿಯನ್ನು ರೈತರು ತಮ್ಮ ಇತರೆ ರೈತರಿಗೆ ತಾವು ಅಳವಡಿಸಿದ ಈ ತಂತ್ರಜ್ಞಾನವನ್ನು ಕನಿಷ್ಠ ಪಕ್ಷ ಒಬ್ಬ ರೈತರು ಇಪತ್ತು ಜನ ರೈತರಿಗೆ ತಲುಪಿಸುವ ಕಾರ್ಯವನ್ನು ಮಾಡಬೇಕೇಂದು ರೈತರಲ್ಲಿ ವಿನಂತಿಸಿದರು.

ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹ ವಿಸ್ತರಣಾ ನಿರ್ದೇಶಕ ಡಾ. ಎಸ್. ಯು. ಪಾಟೀಲ್ ಮಾತನಾಡಿ, ರೈತರು ಈ ಹೊಸ ತಂತ್ರಜ್ಞಾನವನ್ನು ವೈಜ್ಞಾನಿಕವಾಗಿ ಮತ್ತು ವಿಜ್ಞಾನಿಗಳ ಸಲಹೆಯಿಂದ ಕಳೆಯನ್ನು ನಿಯಂತ್ರಿಸುವುದರಲ್ಲಿ ಯಶಸ್ಸು ಕಂಡಿರುವುದಕ್ಕಾಗಿ ರೈತರಿಗೆ ಅಭಿನಂದನೆಯನ್ನು ಸಲ್ಲಿಸಿದರು.
ಕುಂದಾಪುರ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕಿ ರೂಪಾ ಮಾಡ ಮಾತನಾಡಿ, ಹಳದಿ ಹಸಿರು ಪಾಚಿ ಸಮಸ್ಯೆಯು ಸುಮಾರು ಏಳರಿಂದ ಎಂಟು ವರ್ಷದಿಂದ ಭತ್ತದ ಗದ್ದೆಗಳಲ್ಲಿ ಕರಾವಳಿಯ ವಿವಿಧ ತಾಲೂಕುಗಳಲ್ಲಿ ವ್ಯಾಪಿಸುತ್ತಾ ಬಂದಿದ್ದು ಈ ಸಮಸ್ಯೆಯನ್ನು ಸಂಶೋಧನೆ ಮುಖಾಂತರ ಯಶಸ್ಸನ್ನು ಕಂಡು ಈ ದಿನ ರೈತರ ಕ್ಷೇತ್ರದಲ್ಲಿ ಮುಂಚೂಣಿ ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಂಡು ಕಳೆಯನ್ನು ಸಮರ್ಪಕವಾಗಿ ನಿರ್ವಹಿಸುವ ಬಗ್ಗೆ ರೈತರಿಗೆ ಆಶಾಕಿರಣವಾಗಿ ನಿಂತಿರುವ ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರವನ್ನು ಶ್ಲಾಘನೆ ಮಾಡಿದರು.
ಮುಂಚೂಣಿ ಪ್ರಾತ್ಯಕ್ಷಿಕೆಯನ್ನು ಅಳವಡಿಸಿ ಯಶಸ್ಸು ಕಂಡ ರೈತ ಶ್ರೀ. ಬಾಬು ಗಾಣಿಗ ಹಾಗೂ ಶ್ರೀ. ಅಣ್ಣಯ್ಯ ಗಾಣಿಗ ಮಾತನಾಡಿ ಈ ಹೊಸ ತಂತ್ರಜ್ಞಾನದಿಂದ ನಮಗೆ ಭತ್ತದ ಗದ್ದೆಯಲ್ಲಿ ಹಳದಿ ಹಸಿರು ಪಾಚಿ ಕಳೆಯೊಂದಿಗೆ ಬೇರೆ ಕಳೆಗಳನ್ನು ಕೂಡ ಸಂಪೂರ್ಣವಾಗಿ ನಿರ್ವಹಣೆ ಮಾಡುವುದರಲ್ಲಿ ಯಶಸ್ಸನ್ನು ಕಂಡುಕೊಂಡಿದ್ದಲ್ಲದೇ ಬೇಸಾಯದ ಖರ್ಚು ಕೂಡ ನಮಗೆ ಕಡಿಮೆಯಾಗಿದೆ ಹಾಗೂ ಈ ವರ್ಷ ಕಳೆದ ವರ್ಷಗಳಿಗಿಂತ ಸುಮಾರು 3 ರಿಂದ 4 ಕ್ವಿಂಟಾಲ್ ನಷ್ಟು ಭತ್ತದ ಇಳುವರಿಯನ್ನು ಪ್ರತಿ ಎಕರೆಗೆ ಪಡೆಯುತ್ತೇವೆ ಎಂದು ಸಂತೋಷವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ. ಸಚಿನ್ ಯು. ಎಸ್, ರೈತ ಸಂಪರ್ಕ ಕೇಂದ್ರ ವಂಡ್ಸೆ, ಕೃಷಿ ಅಧಿಕಾರಿ ಶ್ರೀಮತಿ. ಮಮತಾ ಹಾಗೂ ಆತ್ಮ ಯೋಜನೆಯ ಅಧಿಕಾರಿ ಜ್ಯೋತಿ ಭಾಗವಹಿಸಿದ್ದರು. ಬೇಸಾಯಶಾಸ್ತ್ರ ವಿಜ್ಞಾನಿಗಳಾದ ಡಾ. ನವೀನ್ ಎನ್. ಈ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರದ ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ಥÀ ಡಾ. ಬಿ. ಧನಂಜಯ ಸ್ವಾಗತಿಸಿದರು. ಈ ಕಾರ್ಯಕ್ರಮದಲ್ಲಿ ಕುಂದಬಾರಂದಾಡಿ ಗ್ರಾಮದ 42 ರೈತರು ಭಾಗವಹಿಸಿದ್ದು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.
