ವರದಿ : ದಿನೇಶ್ ರಾಯಪ್ಪನಮಠ
ಗಂಗೊಳ್ಳಿ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂ ಸೇವಕ ದಿ. ರಾಜೇಶ್ ಉಪ್ಪಿನಕುದ್ರು ಅವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬಿಜೆಪಿ ಬೈಂದೂರು ಮಂಡಲ ಉಪಾಧ್ಯಕ್ಷ, ಉದ್ಯಮಿ ವಿನೋದ್ ಕುಮಾರ್ ಗುಜ್ಜಾಡಿ ಹಾಗೂ ಅವರ ಪತ್ನಿ ಒಂದು ಲಕ್ಷ ರೂ. ಸಹಾಯಧನ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ದಿ.ರಾಜೇಶ ಉಪ್ಪಿನಕುದ್ರು ಮನೆಗೆ ಭೇಟಿ ನೀಡಿದ ವಿನೋದ್ ಕುಮಾರ್ ಗುಜ್ಜಾಡಿ ಹಾಗೂ ಅವರ ಪತ್ನಿ, ರಾಜೇಶ ಉಪ್ಪಿನಕುದ್ರು ಅವರ ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕಾಗಿ ಒಂದು ಲಕ್ಷ ನಗದು ಹಸ್ತಾಂತರಿಸಿ ಕುಟುಂಬಸ್ಥರಿಗೆ ನೆರವಾದರು.
ಬಳಿಕ ಮಾತನಾಡಿದ ವಿನೋದ ಕುಮಾರ್ ಗುಜ್ಜಾಡಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂ ಸೇವಕರು ದೇಶಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟು ಸೇವೆ ಸಲ್ಲಿಸುತ್ತಾ ಇದ್ದಾರೆ. ದೇಶದ ಗಡಿ ಕಾಯುವ ಸೈನಿಕನಾದರೆ ದೇಶದ ಒಳಗೆ ಕಾಯುವನು ಸಂಘದ ಸ್ವಯಂ ಸೇವಕ. ಇವರಿಬ್ಬರೂ ತಮ್ಮ ಕುಟುಂಬವನ್ನು ಬಿಟ್ಟು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದರೆ ಆ ಕುಟುಂಬ ಅನಾಥವಾಗುತ್ತದೆ. ಸಾಮಾಜಿಕ ಸೇವೆಯಲ್ಲೇ ತನ್ನ ಜೀವನ ಸವಿಸಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತಾಲೂಕು ಉದ್ಯೋಗಿ ಪ್ರಮುಖ್ ದಿ.ರಾಜೇಶ್ ಉಪ್ಪಿನಕುದ್ರು ಅವರ ಮಕ್ಕಳ ಭವಿಷ್ಯಕ್ಕಾಗಿ ವಯಕ್ತಿಕ ನೆಲೆಯಲ್ಲಿ ಸಹಾಯಧನ ನೀಡಲಾಗಿದ್ದು, ಸಂಘದ ಸ್ವಯಂಸೇವಕ ಕುಟುಂಬದ ಜೊತೆಗೆ ಇರುವುದಾಗಿ ಅವರು ಹೇಳಿದರು.
ಈ ಸಂಧರ್ಭದಲ್ಲಿ ಬಿಜೆಪಿಯ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ತಲ್ಲೂರು ಗ್ರಾಮ ಪಂಚಾಯತ್ ಸದಸ್ಯ ರಾಧಾಕೃಷ್ಣ ಶೇರುಗಾರ್ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಉಪಸ್ಥಿತರಿದ್ದರು.
