ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ: ಗಂಗೊಳ್ಳಿಯಲ್ಲಿ ಅಮಾನುಷವಾಗಿ ಮತ್ತು ಭಯಾನಕ ರೀತಿಯಲ್ಲಿ ಗೋವುಗಳನ್ನು ಕೊಯ್ದು ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ವಿಕೃತ ಮೆರೆದಿದ್ದು ಖಂಡನೀಯ ವಿಚಾರವಾಗಿದೆ ಎಂದು ಹಿಂದೂ ಜಾಗರಣ ವೇದಿಕೆಯ ಕರ್ನಾಟಕ ದಕ್ಷಿಣ ಪ್ರಾಂತ್ಯದ ಪ್ರಧಾನ ಕಾರ್ಯದರ್ಶಿ ಟಿ.ಕೆ. ಉಲ್ಲಾಸ್ ಹೇಳಿದರು.
ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿ ಗೋ ಹತ್ಯೆ ವಿರೋಧಿಸಿ ಮತ್ತು ಗೋ ಹಂತಕರನ್ನು ಗಡಿಪಾರು ಮಾಡಲು ಒತ್ತಾಯಿಸಿ ಗಂಗೊಳ್ಳಿಯಲ್ಲಿ ಹಿಂದು ಸಂಘಟನೆಗಳಿಂದ ಶುಕ್ರವಾರ ಬೃಹತ್ ಪ್ರತಿಭಟನಾ ಜಾಥಾ ನಡೆದಿದ್ದು ಬಳಿಕ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ವಿಡಿಯೋ ವೈರಲ್ ವಿಚಾರದಲ್ಲಿ ಹಿಂದೂಗಳು ಕೇಸ್ ದಾಖಲು ಮಾಡುವ ಅನಿವಾರ್ಯತೆ ಇರಲಿಲ್ಲ. ಶಾಂತಿ ಕದಡುವ ವಿಡಿಯೋ ಮಾಡಿ ಹರಿಬಿಟ್ಟವರ ವಿರುದ್ದ ಪೊಲೀಸರು ಸುಮೊಟೊ ಪ್ರಕರಣ ದಾಖಲು ಮಾಡಿ ಗೂಂಡಾ ಕಾಯ್ದೆ ಅಡಿಯಲ್ಲಿ ಗಡಿಪಾರು ಮಾಡಬಹುದಿತ್ತು. ಆದರೆ ಅವರು ಗೋರಕ್ಷಕರ ವಿರುದ್ದ ಕೇಸ್ ಹಾಕುತ್ತಾರೆ. ಆದರೆ ಗೋ ಕಳ್ಳರ ವಿರುದ್ದ ಕೇಸ್ ದಾಖಲು ಮಾಡಲು ಹಿಂದೆ ಮುಂದೆ ಯೋಚಿಸುತ್ತಾರೆ ಎಂದು ಆರೋಪಿಸಿದರು.
ಗೋವು ಮಾನವೀಯ ಭಾವನೆ ಇರುವ ಪ್ರಾಣಿಯಾಗಿದೆ. ಗೋವಿನ ಹಾಲನ್ನೇ ನಾವು ಕುಡಿಯುತ್ತೇವೆ. ಅದು ನಮಗೆ ತಾಯಿಯ ಸಮಾನ. ಅಂತಹ ಪ್ರಾಣಿಯನ್ನು ಕೊಲ್ಲುವುದು ತಾಯಿಯನ್ನೇ ಕೊಂದ ಹಾಗೇ. ಹಿಂದೂಗಳ ಮನೆಗೆ ತೆರಳಿ ತಲವಾರು ತೋರಿಸಿ ದನಗಳನ್ನು ಕದಿಯುತ್ತಿದ್ದಾರೆ. ಇಂತಹವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದವರು ಆಗ್ರಹಿಸದರು.
ರಾಜ್ಯ ಸರಕಾರ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿದ್ದರೂ ಗಂಗೊಳ್ಳಿ ಠಾಣೆಗೆ ಇದರ ಬಗ್ಗೆ ಮಾಹಿತಿ ಇದ್ದಂತಿಲ್ಲ ಎಂದು ಆರೋಪಿಸಿದ ಅವರು ಹಿಂದೂ ಸಮಾಜ ಇಂತಹ ನೀಚ ಕೃತ್ಯಗಳ ವಿರುದ್ದ ಒಟ್ಟಾಗಿ ಹೋರಾಡಲು ಸಜ್ಜಾಗಿದೆ. ಗೋ ಭಕ್ಷಕರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಅಕ್ರಮ ಮಸೀದಿಗಳನ್ನು ತೆರವುಗೊಳಿಸುವ ಕೆಲಸ ಜಿಲ್ಲಾಡಳಿತ ಮಾಡಬೇಕು. ಲೌಡ್ ಸ್ಪೀಕರ್ ಹಾಕಿ ಅಜಾನ್ ಕೂಗುವುದರಿಂದ ಎಲ್ಲರಿಗೂ ಸಮಸ್ಯೆ ಆಗುತ್ತಿದೆ. ಹಿಂದೂ ಸಮಾಜಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟ ಅನಿವಾರ್ಯವಾಗಿದೆ. ಶೀಘ್ರವೇ ಗೋ ಕಳ್ಳರ ಬಂಧನವಾಗಬೇಕು, ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ಗೋ ಹಂತಕರ ಬಂಧನ ಮತ್ತು ಗಡಿಪಾರಿಗೆ ಒತ್ತಾಯಿಸಿ ಇದೇ ಸಂದರ್ಭ ತಹಶೀಲ್ದಾರ್ ಕಿರಣ್ ಗೌರಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.
ಹಿಂದೂ ಜಾಗರಣ ವೇದಿಕೆ ಮಂಗಳೂರು ವಿಭಾಗದ ಪ್ರ. ಕಾರ್ಯದರ್ಶಿ ಪ್ರಕಾಶ್ ಕುಕ್ಕೆಹಳ್ಳಿ, ಹಿಂ. ಜಾ. ವೇ. ಉಡುಪಿ ಜಿಲ್ಲಾಧ್ಯಕ್ಷ ಪ್ರಶಾಂತ್ ನಾಯಕ್, ಗಂಗೊಳ್ಳಿ ಹಿಂ. ಜಾ. ವೇ. ಅಧ್ಯಕ್ಷ ಗೋವಿಂದ ಶೇರುಗಾರ್, ಮುಖಂಡರಾದ ವಾಸುದೇವ ಗಂಗೊಳ್ಳಿ, ನವೀನ್ ಗಂಗೊಳ್ಳಿ, ಯಶವಂತ್ ಗಂಗೊಳ್ಳಿ, ಮಹೇಶ್ ಬೈಂದೂರು ಮತ್ತಿತರರಿದ್ದರು.