ಮೂಡಬಿದಿರೆ : ದ್ವಿಚಕ್ರ ವಾಹನಕ್ಕೆ ಓಮ್ನಿ ಡಿಕ್ಕಿ ಹೊಡೆದ ದ್ವಿಚಕ್ರ ವಾಹನದಲ್ಲಿದ್ದ ಖ್ಯಾತ ಯಕ್ಷಗಾನ ಕಲಾವಿದ ವೇಣೂರು ವಾಮನ ಕುಮಾರ್(46) ಮೃತಪಟ್ಟಿದ್ದಾರೆ. ಮೂಡಬಿದಿರೆ-ವೇಣೂರು ರಸ್ತೆಯ ಗಂಟಾಲ್ ಕಟ್ಟೆ ಎಂಬಲ್ಲಿ ಅಪಘಾತ ಸಂಭವಿಸಿದ್ದು, ಕಲಾವಿದ ವಾಮನ ವಿಧಿವಶರಾಗಿದ್ದಾರೆ.
ನಿನ್ನೆ ರಾತ್ರಿ ಕುಂದಾಪುರದ ಕೊಂಕಿ ಎಂಬಲ್ಲಿ ರಾತ್ರಿ ಯಕ್ಷಗಾನವನ್ನು ಮುಗಿಸಿ ಇಂದು ಬೆಳಗ್ಗೆ ತಮ್ಮ ದ್ವಿಚಕ್ರ ವಾಹನದಲ್ಲಿ ಮನೆಗೆ ಹೋಗುತ್ತಿರುವಾಗ ಬೆಳಗಿನ ಜಾವ 6.30 ರ ಸುಮಾರಿಗೆ ಗಂಟಾಲ್ಕಟ್ಟೆ ಬಳಿ ಒಮ್ನಿ ಕಾರಿನ ನಡುವೆ ಅಪಘಾತ ಸಂಭವಿಸಿದ ಪರಿಣಾಮ ವಾಮನ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವಾಮನ ಕುಮಾರ್, ಕಿಶನ್ ಹೆಗ್ಡೆ ಎಂಬವರ ಸಂಚಾಲಕತ್ವದ ಹಿರಿಯಡ್ಕ ಮೇಳದಲ್ಲಿ ಕಲಾವಿದರಾಗಿ ಮತ್ತು ಪ್ರಬಂಧಕರಾಗಿ ಸೇವೆ ಸಲ್ಲಿಸುತ್ತಿದ್ದರು.

ಪ್ರಸಂಗಕರ್ತ ಮನೋಹರ್ ಕುಮಾರ್ ಅವರಿಂದ ಪ್ರಭಾವಿತರಾಗಿ ಧರ್ಮಸ್ಥಳದಲ್ಲಿ ಕರ್ಗಲ್ಲು ವಿಶ್ವೇಶ್ವರ ಭಟ್ ಅವರಿಂದ ಯಕ್ಷಗಾನದ ಹೆಜ್ಜೆ ಕಲಿತಿದ್ದರು. ಆರಂಭದಲ್ಲಿ ಧರ್ಮಸ್ಥಳ ಮೇಳ, ನಂತರ ನಾಲ್ಕು ವರ್ಷಗಳ ಕಾಲ ಕದ್ರಿ ಮೇಳ, 15 ವರ್ಷಗಳ ಕಾಲ ಮಂಗಳಾದೇವಿ ಮೇಳ, ಕಳೆದ 9 ವರ್ಷಗಳಿಂದ ಹಿರಿಯಡಕ ಮೇಳದಲ್ಲಿ ವೇಷಧಾರಿಯಾಗಿ ಮತ್ತು ಮೇಳದ ಮ್ಯಾನೇಜರ್ ಆಗಿ ವಾಮನ ಕುಮಾರ್ ಅವರು ಸೇವೆ ಸಲ್ಲಿಸುತ್ತಿದ್ದರು.
