ವರದಿ : ಶ್ರೀದತ್ತ ಹೆಬ್ರಿ
ಎಲಿಕೋಡು ಶಿವಪುರ : ಅತೀ ಸಣ್ಣ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗುವುದು ಇಂದಿನ ದಿನಮಾನದಲ್ಲಿ ಕಷ್ಟ. ಜನರ ಸೇವೆಯನ್ನು ಅತ್ಯುತ್ತಮವಾಗಿ ಮಾಡಿ ಜನಮನ್ನಣೆ ಪಡೆದು ಜನಸೇವಕರಾಗಿದ್ದಾರೆ. ಅವರ ಪ್ರತಿಭೆಯನ್ನು ಗುರುತಿಸಿದಾಗ ಪ್ರೇರಣೆ ದೊರೆತು ಇನ್ನಷ್ಟು ಸಾಧನೆ ಮಾಡುತ್ತಾರೆ. ಇತರರಿಗೂ ಪ್ರೇರಣೆ ದೊರೆಯುತ್ತದೆ. ಅವರ ಮೂಲಕ ಇನ್ನಷ್ಟು ಗ್ರಾಮೀಣ ಪ್ರತಿಭೆಗಳು ಹೊರಹೊಮ್ಮಲಿ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಹೆಬ್ರಿ ತಾಲ್ಲೂಕು ಘಟಕದ ಅಧ್ಯಕ್ಷ ನವೀನ್ ಕೆ. ಅಡ್ಯಂತಾಯ ಹೇಳಿದರು.
ಅವರು ಶಿವಪುರ ಎಲಿಕೋಡು ನಾಗಬ್ರಹ್ಮ ಸ್ಥಾನದಲ್ಲಿ ಭಾನುವಾರ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಹೆಬ್ರಿ ತಾಲ್ಲೂಕು ಘಟಕದ ವತಿಯಿಂದ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದು ಸಾಧನೆ ಮಾಡಿದ ರಾಷ್ಟ್ರೀಯ ಮಟ್ಟದ ಸಾಧಕ ಕ್ರೀಡಾ ಪ್ರತಿಭೆ ಹೆಬ್ರಿ ಚಾರ ಮುದ್ರಾಡಿ ಕಬ್ಬಿನಾಲೆ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ನವೀನ್ ಕುಮಾರ್ ಕುಕ್ಕುಜೆ ಅವರಿಗೆ ನಡೆದ ಸಾರ್ವಜನಿಕ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹೆಬ್ರಿ ಗ್ರಾಮ ಪಂಚಾಯತಿಯ ಗ್ರಾಮಸಭೆಯಲ್ಲೇ ಗ್ರಾಮಸ್ಥರು ಗ್ರಾಮ ಲೆಕ್ಕಾಧಿಕಾರಿ ನವೀನ್ ಕುಮಾರ್ ಜನಸೇವಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವುದು ನಮಗೆಲ್ಲ ಹೆಮ್ಮೆ ಎಂದು ಅಭಿನಂದಿಸಿದರು.
ಹಿರಿಯರಾದ ನಿವೃತ್ತ ಮುಖ್ಯ ಶಿಕ್ಷಕ ಶಿವಪುರ ಶಂಕರ ನಾರಾಯಣ ಕೊಡಂಚ ನವೀನ್ ಕುಮಾರ್ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಾರ್ವಜನಿಕ ಸನ್ಮಾನ ಸ್ವೀಕರಿಸಿದ ಗ್ರಾಮ ಲೆಕ್ಕಾಧಿಕಾರಿ ನವೀನ್ ಕುಮಾರ್ ಕುಕ್ಕುಜೆ ಮಾತನಾಡಿ ಪ್ರೀತಿಯ ಸನ್ಮಾನ ಖುಷಿ ನೀಡಿದೆ, ಇನ್ನಷ್ಟು ಜನರ ಸೇವೆ ಮಾಡಲು ದೊಡ್ಡ ಶಕ್ತಿ ದೊರೆತಿದೆ ಎಂದು ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದ ರೂವಾರಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಉಡುಪಿ ಜಿಲ್ಲಾ ಘಟಕದ ನಿರ್ದೇಶಕರಾದ ಎಲಿಕೋಡು ನಾಗಬ್ರಹ್ಮ ಸ್ಥಾನದ ಬೈಕಾಡಿ ಮಂಜುನಾಥ ಭಟ್ ಶಿವಪುರ, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಉಡುಪಿ ಜಿಲ್ಲಾ ಘಟಕದ ನಿರ್ದೇಶಕ ಮುರಳೀಧರ ಭಟ್, ಜಿಲ್ಲಾ ಸಂಚಾಲಕ ಪತ್ರಕರ್ತ ಸುಕುಮಾರ್ ಮುನಿಯಾಲ್, ಹೆಬ್ರಿ ತಾಲ್ಲೂಕು ಘಟಕದ ಮಹಿಳಾ ಸಂಚಾಲಕಿ ಶಿವಪುರ ಸುನಂದ ಕುಲಾಲ್, ಕೋಶಾಧಿಕಾರಿ ಎಚ್.ಜನಾರ್ಧನ್, ನಿರ್ದೇಶಕರಾದ ದೈಹಿಕ ಶಿಕ್ಷಣ ಶಿಕ್ಷಕ ನಿತ್ಯಾನಂದ ಶೆಟ್ಟಿ, ಸದಸ್ಯರಾದ ಜಗನ್ನಾಥ ಕುಲಾಲ್, ಉಡುಪಿ ತಾಲ್ಲೂಕು ಮೂಡನಿಡಂಬೂರು ಗ್ರಾಮ ಲೆಕ್ಕಾಧಿಕಾರಿ ಪುನೀತ್, ಕೊಡವೂರು ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಕಾರ್ತಿಕೇಯ ಭಟ್, ಸ್ಥಳೀಯ ಗಣ್ಯರು, ಬ್ರಹ್ಮಸ್ಥಾನದ ಪ್ರಮುಖರು ಉಪಸ್ಥಿತರಿದ್ದರು.
ನಿತ್ಯಾನಂದ ಶೆಟ್ಟಿ ಸ್ವಾಗತಿಸಿ ನಿರೂಪಿಸಿದರು. ಎಚ್.ಜನಾರ್ಧನ್ ವಂದಿಸಿದರು.
