ವರದಿ : ಬಿ.ಎಸ್.ಆಚಾರ್ಯ
ಉಡುಪಿ : ಭಾರತ ಸರಕಾರದ ರಕ್ಷಣಾ ಸಚೀವಾಲಯದ ನಿರ್ದೇಶಕ, ಜಲ ಶಕ್ತಿ ಅಭಿಯಾನದ ನೋಡಲ್ ಅಧಿಕಾರಿ ಪಿಯುಷ್ ರಂಜನ್ ಹಾಗೂ ಕೇಂದ್ರೀಯ ತಾಂತ್ರಿಕ ಅಧಿಕಾರಿ ಲಕ್ಷ್ಮೀ ನಾರಾಯಣ ತಾಕುರಾಳ್ ಅವರು
ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು.
ಕುಂದಾಪುರ ಪುರಸಭಾ ವ್ಯಾಪ್ತಿಯ ಸಸಿಹಿತ್ಲು ಕೆರೆ, ಮಂಗಲ್ ಪಾಂಡೆ ಕೆರೆ, ಶಾಂತಿ ನಿಕೇತನ ಕೆರೆಗಳ ಜಲಸಂರಕ್ಷಣಾ ಕ್ರಮಗಳನ್ನು ವೀಕ್ಷಿಸಿ ಸಲಹೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಪ್ರತಿಭಾ, ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ನೆಹರು ಯುವಕೇಂದ್ರದ ಸಮನ್ವಯಾಧಿಕಾರಿ ವಿಲ್ಫ್ರೆಡ್ ಡಿ ಸೋಜ ಉಪಸ್ಥಿತರಿದ್ದರು.

ನಂತರ ಬ್ರಹ್ಮಾವರ ತಾಲೂಕಿನ ಹೇರೂರು – ಬೈಕಾಡಿ ನಡುವಿನ ಉಪ್ಪು ನೀರು ತಡೆ ಕಿಂಡಿ ಅಣೆಕಟ್ಟು ಕಾಮಗಾರಿಯನ್ನು ಪರಿಶೀಲಿಸಿದರು. ಸಂದರ್ಭದಲ್ಲಿ ಎಇಇ ಹರೀಶ್, ಗ್ರಾಪಂ ಅಧ್ಯಕ್ಷರಾದ ಪ್ರಭಾಕರ್ ಶೆಟ್ಟಿ, ಪಿಡಿಒ ಆದರ್ಶ್ ಉಪಸ್ಥಿತರಿದ್ದರು.
ಉಡುಪಿ ಮಳೆ ನೀರು ಕೊಯ್ಲು ತಂತ್ರಜ್ಞಾನ ಶ್ಲಾಘಿಸಿದ ಕೇಂದ್ರದ ಅಧಿಕಾರಿಗಳು, ಅತೀ ಹೆಚ್ಚು ಮಳೆ ಬೀಳುವ ಉಡುಪಿ ಜಿಲ್ಲೆಯು 2016 ರಲ್ಲಿ ಕುಡಿಯುವ ನೀರಿಗೂ ಕೊರತೆ ಉಂಟಾಗಿತ್ತು. ಆ ಸಂದರ್ಭದಲ್ಲಿ ಉಡುಪಿ ಜಿಲ್ಲಾಡಳಿತದ ಸೂಚನೆ ಮೇರೆಗೆ ಜನತೆ ಮಳೆ ನೀರು ಕೊಯ್ಲು ವಿಧಾನಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಘಟಕಗಳನ್ನು ನಿರ್ಮಿಸಲು ಆರಂಭಿಸಿದ್ದರು. ಕೇಂದ್ರ ಸರಕಾರದ ಅಧಿಕಾರಿಗಳು ತಮ್ಮ ಮುಂದಿನ ಭೇಟಿಯಲ್ಲಿ ಉಡುಪಿಯ ವಿಭಿನ್ನ ಹಾಗೂ ವ್ಯವಸ್ಥಿತ ರೀತಿಯ ಇಂತಹ ಮಳೆ ನೀರು ಕೊಯ್ಲು ಘಟಕಗಳನ್ನು ಪರಿಶೀಲಿಸಿ ವಿಶೇಷ ಮೆಚ್ಚುಗೆ ವ್ಯಕ್ತ ಪಡಿಸಿದರು.
ಕಲ್ಯಾಣಪುರ ಗ್ರಾಮ ಪಂಚಾಯತ್: 240 ಚ.ಮೀ ವಿಸ್ತೀರ್ಣದ ಛಾವಣಿಯಲ್ಲಿ ವರ್ಷಕ್ಕೆ ಸರಾಸರಿ 4000 ಮಿ.ಮೀ. ಬೀಳುವ ಮಳೆ ಸಂಗ್ರಹಿಸಿ ಮಾದರಿ ಬಾವಿಗೂ ಹಾಗೂ ದೇವಸ್ಥಾನದ ತೆರೆದ ಬಾವಿಗೂ ಸುಮಾರು 960000 ಲೀ ನೀರು ಸೋಸಿ ಹೋಗುವಂತೆ ಮಾಡಲಾಗಿದೆ. ಗ್ರಾಮ ಪಂಚಾಯತಿಗೆ ನಾನಾ ಕಾರಣಗಳಿಗಾಗಿ ಭೇಟಿ ಕೊಡುವ ಗ್ರಾಮಸ್ಥರು ಈ ಘಟಕವನ್ನು ನೋಡಿ ಅದರಂತೆ ಅವರವರ ಮನೆಗಳಲ್ಲಿ ಮಳೆ ನೀರು ಕೊಯ್ಲು ಘಟಕಗಳನ್ನು ನಿರ್ಮಿಸಲು ಪ್ರೇರೆಪಣೆಯಾಗುವಂತಿದೆ. ಪರಿಶೀಲನಾ ಸಂದರ್ಭದಲ್ಲಿ ಕಲ್ಯಾಣಪುರ ಗ್ರಾಪಂ ಅಧ್ಯಕ್ಷರು, ಸದಸ್ಯರು, ಪಿಡಿಒ ರವರು ಉಪಸ್ಥಿತರಿದ್ದರು.
ಮದರ್ ಆಫ್ ಸಾರೋವ್ಸ್ ಚರ್ಚ್ ಉಡುಪಿ : ವಿಶೇಷ ಶೈಲಿಯ ಎರಡು ವಿಧಾನಗಳು
ಒಂದನೇ ವಿಧಾನ: ಛಾವಣಿಯ 2024 ಚಮೀ ವಿಸ್ತೀರ್ಣದಲ್ಲಿ ವಾರ್ಷಿಕ ಸರಾಸರಿ 8096000 ಲೀ ಬೀಳುವ ಮಳೆ ನೀರನ್ನು ಪ್ರತೀ ವರ್ಷ ಆವರಣದಲ್ಲಿ ಬತ್ತುತ್ತಿರುವ ತೆರೆದ ಬಾವಿಗೆ ಸುವ್ಯವಸ್ಥಿತವಾಗಿ ಹಾಗೂ ಸೋಸುವ ವಿಧಾನವನ್ನು ವಿಶೇಷ ವಿನ್ಯಾಸದಿಂದ ಮಾಡಲಾಗಿದ್ದು ಭಾರಿ ಮಳೆ ಬಿದ್ದಾಗಲೂ ಈ ಸೋಸುವ ಘಟಕ ತುಂಬಿ ನೀರು ಹೊರ ದುಮುಕದಂತೆ ಹಾಗೂ ನೂರಕ್ಕೆ ನೂರು ಶೇಖಡ ನೀರು ವೇಗವಾಗಿ ಸೋಸಿ ತೆರೆದ ಬಾವಿಗೆ ಬೀಳುವಂತೆ ಮಾಡಲಾಗಿದೆ.
ಎರಡನೇ ವಿಧಾನ: ಸುಮಾರು ಮೂರು ಎಕರೆ ಜಾಗದ ನೆಲದ ಮೇಲೆ ಬೀಳುವ ಮಳೆ ನೀರನ್ನು ಹೊರಗಡೆ ಬಿಡದೆ ಆವರಣದ ಒಳಗಡೆ ತೋಟದಲ್ಲಿಯೇ ಬ್ರಹತ್ ಆಕಾರದ ಇಂಗು ಗುಂಡಿ ನಿರ್ಮಿಸಲಾಗಿದ್ದು ಆವರಣದಲ್ಲಿ ಬೀಳುವ ವಾರ್ಷಿಕ ಸರಾಸರಿ ಮಳೆ ಆದರಿಸಿ ಸುಮಾರು 48560000 ಲೀ ನಷ್ಟು ಮಳೆ ನೀರು ಇಂಗಿಸಲಾಗುತ್ತಿದೆ. ಇದಿಷ್ಟೇ ನೀರನ್ನು ಶೇಖರಿಸಿ ಜಲ್ ಜೀವನ್ ಮಿಷನ್ ನೀರು ಪೋರೈಕೆ ಅಂಕಿ ಅಂಶದಂತೆ ದಿನ ಒಂದಕ್ಕೆ ಒಬ್ಬರಿಗೆ 55 ಲೀ ನೀರು ಪೂರೈಸುವುದಾರೆ ವರ್ಷ ಪೂರ್ತಿ ಸುಮಾರು 2418 ಜನರಿಗೆ ಪೂರೈಸಲು ಸಾಧ್ಯವಿದೆ.
ಸಾಯೀ ರಾಧಾ ಆಶ್ರಯ ಅಪರ್ಟ್ ಮೆಂಟ್, ಕೊಳಂಬೆ ಉಡುಪಿ.: ಇಲ್ಲಿ ವಸತಿ ಸಮುಚ್ಚಯದ ಛಾವಣಿ ಮೇಲೆ ಬೀಳುವ ಮಳೆ ನೀರನ್ನು ಸೋಸಿ ವಿಭಿನ್ನ ವಿಧಾನದಲ್ಲಿ 6 ಲಕ್ಷ ಲೀ ಮಳೆ ನೀರು ಶೇಖರಣಾ ಘಟಕ ಹಾಗೂ 20 ಅಡಿ ಆಳದಲ್ಲಿ ಬೋರ್ವೆಲ್ ರೀಚಾರ್ಜ್ ಘಟಕ ನಿರ್ಮಿಸಲಾಗಿದೆ.
ಈ ಎಲ್ಲಾ ಮಳೆ ನೀರು ಕೊಯ್ಲು ಘಟಕಗಳನ್ನು ನಿರ್ಮಿಸಿರುವ ಉಡುಪಿ ಜಲ ಮರುಪೂರಣ ತಜ್ಞ ರಾಜ್ಯ ಸಂಪನ್ಮೂಲ ವ್ಯಕ್ತಿ ಜೋಸೆಫ್ ಜಿ. ಎಮ್. ರೆಬೆಲ್ಲೊ ಜಿಲ್ಲಾಡಳಿತದ ಅಧಿಕಾರಿಗಳ ಜೊತೆಯಲ್ಲಿ ಕೇಂದ್ರದ ಅಧಿಕಾರಿಗಳಿಗೆ ಅಂಕಿ ಅಂಶಗಳೊಂದಿಗೆ ವರದಿ ವಿವರಣೆ ನೀಡಿದರು. ಮಳೆ ಕೊಯ್ಲು ಘಟಕ ನಿರ್ಮಿಸಿದ ಸ್ಥಳಗಳಲ್ಲಿ ಕೇವಲ ಒಂದೆರಡು ವರುಷಗಳಲ್ಲಿ ಅಂತರ್ಜಲ ಮಟ್ಟ ಏರಿಕೆ ಕಂಡಿದ್ದು ಜಲ ಶಕ್ತಿ ಅಭಿಯಾನದ ನೋಡಲ್ ಅಧಿಕಾರಿ ಪಿಯುಷ್ ರಂಜನ್ ಹಾಗೂ ಕೇಂದ್ರೀಯ ತಾಂತ್ರಿಕ ಅಧಿಕಾರಿ ಲಕ್ಷ್ಮೀ ನಾರಾಯಣ ತಾಕುರಾಳ್ ಅವರು ಪ್ರಶಂಸೆ ವ್ಯಕ್ತ ಪಡಿಸಿದರು. ಇದೇ ರೀತಿಯಲ್ಲಿ ಪ್ರತಿಯೊಬ್ಬರು ತಮ್ಮ ತಮ್ಮ ಸ್ಥಳಗಳಲ್ಲಿ ಈ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಪ್ರಜ್ಞಾವಂತರ ಬುದ್ಧಿವಂತಿಕೆಯಲ್ಲಿ ಅಡಗಿದೆ ಎಂದು ಅಭಿಪ್ರಾಯಪಟ್ಟರು.

ಜಿ.ಪಂ ಯೋಜನಾ ನಿರ್ದೇಶಕ ಬಾಬು, ಕಾರ್ಯನಿರ್ವಾಹಕ ಅಭಿಯಂತರರು ಬಿ.ಟಿ. ಮೋಹನ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಗಿರೀಶ್ ಶೇಟ್, ಜೆಜೆಎಮ್ ಜಿಲ್ಲಾ ಯೋಜನಾ ವ್ಯವಸ್ಥಾಪಕ ಸುಧೀರ್ ಕುಮಾರ್ ಉಪಸ್ಥಿತರಿದ್ದರು.