ಚಂದನವನ : ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆ 777 ಚಾರ್ಲಿ ಸಿನಿಮಾ ಸಕತ್ ಸದ್ದು ಮಾಡುತ್ತಿದೆ. ಮನ ಮುಟ್ಟುವ ಕಥಾ ಹಂದರವುಳ್ಳ ಚಾರ್ಲಿಯಲ್ಲಿ ಸಾಮಾಜಿಕ ಸಂದೇಶವೂ ಇದೆ. ನಿನ್ನೆಗೆ 777 ಚಾರ್ಲಿ ಸಿನಿಮಾ 25 ದಿನಗಳನ್ನು ಪೂರೈಸಿದ್ದು, ಚಿತ್ರತಂಡ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ರಕ್ಷಿತ್ ಶೆಟ್ಟಿ, 777 ಚಾರ್ಲಿ ನಿಮ್ಮನ್ನ ತಲುಪಿ 25 ದಿನಗಳು ಕಳೆದರೂ ಎಂದಿನಂತೆ ನಿಮ್ಮಿಂದ ನಮಗೆ ಸಿಗುತ್ತಿರುವ ಪ್ರೀತಿ ಅನನ್ಯ. ಈ ಚಿತ್ರದಿಂದ ನಾವು ಗಳಿಸಿರುವ ಮೆಚ್ಚುಗೆ ಮನ್ನಣೆಯಿಂದ ನಾವು ಅತ್ಯಂತ ಧನ್ಯರಾಗಿದ್ದೇವೆ.
ಅಲ್ಲದೇ, ಈ ಅಭೂತಪೂರ್ವ ಯಶಸ್ಸಿಗೆ ನಮ್ಮ ತಂಡದ ಪರಿಶ್ರಮವಿದೆ. ಈ ಚಿತ್ರವನ್ನು ಯಶಸ್ವಿಯಾಗಿ ತೆರೆಗೆ ತರುವಲ್ಲಿ ಹಲವಾರು ರೀತಿಯಲ್ಲಿ ಶ್ರಮಿಸಿರುವ ಚಿತ್ರತಂಡದ ಜೊತೆಗೆ 777 ಚಾರ್ಲಿ ಗಳಿಸಿರುವ ಲಾಭದ ಶೇಕಡ 10ರಷ್ಟು ಹಂಚಿಕೊಳ್ಳಲು ನಿರ್ಧರಿಸಿದ್ದೇವೆ ಎಂದು ತಿಳಿಸಿದೆ.

ಇನ್ನು ಈ ಸಿನಿಮಾದಲ್ಲಿ ಕೇವಲ ಚಿತ್ರತಂಡದವರಿಗೆ ಮಾತ್ರವಲ್ಲದೇ ಶೇಕಡ 5 ರಷ್ಟನ್ನು ನಿರಾಶ್ರಿತ ಶ್ವಾನಗಳ ಮತ್ತು ಮೂಕ ಪ್ರಾಣಿಗಳ ರಕ್ಷಣೆ ಪೋಷಣೆಗೆ ಸಮರ್ಪಿತವಾಗಿ ಕೆಲಸ ಮಾಡುತ್ತಿರುವ ಎನ್ಜಿಓಗಳಿಗೆ ಹಾಗೂ ರೆಸ್ಕ್ಯೂ ಸೆಂಟರ್ ಗಳಿಗೆ ಸಹಾಯ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.
ರಕ್ಷಿತ್ ಶೆಟ್ಟಿಯ ಈ ನಿರ್ಧಾರಕ್ಕೆ ಎಲ್ಲೆಡೆ ಮೆಚ್ಚುಗೆ ಕೇಳಿ ಬರುತ್ತಿದೆ.
