ದಿನದಿಂದ ದಿನಕ್ಕೆ ಮಂಕಿಪಾಕ್ಸ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬರುತ್ತಿದೆ. ಹೀಗಾಗಿ ವಿಶ್ವ ಆರೋಗ್ಯ ಸಂಸ್ಥೆ ಆರೋಗ್ಯ ತುರ್ತುಸ್ಥಿತಿ ಘೋಷಣೆ ಮಾಡಿದೆ. WHO ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯಸಸ್ ಈ ಕುರಿತಾದ ಮಾಹಿತಿ ಹಂಚಿಕೊಂಡಿದ್ದು, ಜಾಗತಿಕವಾಗಿ ಮಂಕಿಪಾಕ್ಸ್ ಪ್ರಕರಣಗಳಲ್ಲಿ ಏಕಾಏಕಿ ಏರಿಕೆ ಕಂಡು ಬಂದಿದ್ದು, ಹೀಗಾಗಿ ಸಾರ್ವಜನಿಕರ ಆರೋಗ್ಯ ಕಾಳಜಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಭಾರತ ಸೇರಿದಂತೆ 75 ದೇಶಗಳಲ್ಲಿ ಈಗಾಗಲೇ ಮಂಕಿಪಾಕ್ಸ್ ಪ್ರಕರಣಗಳು ಕಾಣಿಸಿಕೊಂಡಿದ್ದು, ಇದರಿಂದಾಗಿ 5 ಮಂದಿ ಸಾವನ್ನಪ್ಪಿದ್ದಾರೆ. ಹೀಗಾಗಿ ವಿಶ್ವ ಆರೋಗ್ಯ ಸಂಸ್ಥೆ ಮಹತ್ವದ ನಿರ್ಧಾರ ಕೈಗೊಂಡಿದೆ.
ವಿಶ್ವ ಆರೋಗ್ಯ ಸಂಸ್ಥೆಯು ಈ ಹಿಂದೆ ಕೋವಿಡ್ 19 ಸಾಂಕ್ರಾಮಿಕ, 2014ರ ಪಶ್ಚಿಮ ಆಫ್ರಿಕಾದ ಎಬೋಲಾ ವೈರಸ್ ಪಿಡುಗು, 2016ರ ಲ್ಯಾಟಿನ್ ಅಮೆರಿಕದ ಜಿಕಾ ವೈರಸ್ ಮತ್ತು ಪೋಲಿಯೋದಂತಹ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟನ್ನು ತುರ್ತು ಪರಿಸ್ಥಿತಿ ಎಂದು ಘೋಷಣೆ ಮಾಡಿತ್ತು.

ಕೇರಳದಲ್ಲೂ ಈಗಾಗಲೇ ಮೂರು ಮಂಕಿಪಾಕ್ಸ್ ಪ್ರಕರಣಗಳು ಕಾಣಿಸಿಕೊಂಡಿದ್ದು, ಚಿಕಿತ್ಸೆ ನೀಡಲಾಗ್ತಿದೆ. ಸದ್ಯ ಪ್ರಪಂಚದಲ್ಲಿ 16,000 ಪ್ರಕರಣ ದಾಖಲಾಗಿವೆ.