ವರದಿ : ಬಿ.ಎಸ್.ಆಚಾರ್ಯ
ಬಾರಕೂರು : ಸತತ ಮೂರುಬಾರಿ ಗಾಂಧಿಗ್ರಾಮ ಪುರಸ್ಕಾರ ಪಡೆದ ಬಾರಕೂರು ಹನೆಹಳ್ಳಿ ಗ್ರಾಮಪಂಚಾಯತಿಯಲ್ಲಿ ಎಸ್ ಎಲ್ ಆರ್ ಎಂ ಘಟಕ ಮತ್ತು ಸಂಗ್ರಹ ಮಹಿಳೆಯೊಬ್ಬರ ವಾಹನ ಚಾಲನಾ ಸಾರಥ್ಯದಲ್ಲಿ ನಡೆಯುತ್ತಿದೆ.
೧೯೯೩ ರ ತನಕ ಬಾರಕೂರು ಗ್ರಾಮ ಪಂಚಾಯತಿಯಗೆ ಸೇರಿಕೊಂಡಿದ್ದು, ೨೯ ವರ್ಷದ ಹಿಂದೆ ಹನೆಹಳ್ಳಿ ಗ್ರಾಮಪಂಚಾಯತಿ ರಚನೆಗೊಂಡು ೧೭೮೬. ೬೬ ಸೆನ್ಸ್ ವಿಸ್ತೀರ್ಣದ ಹನೆಹಳ್ಳಿ ಗ್ರಾಮ ಪಂಚಾಯತಿಯಲ್ಲಿ ೮೫೦ ಮನೆ, ೧೭೨ ವಾಣಿಜ್ಯ ಕೇಂದ್ರ , ೧ ಪದವಿ ಕಾಲೇಜು ೧ ಪಿಯು ಕಾಲೇಜು ೩ ಪ್ರಾಥಮಿಕ ಶಾಲೆ ೫ ಅಂಗನವಾಡಿ ಇದ್ದು ೪೨೦೬ ಜನಸಂಖ್ಯೆ ಹೊಂದಿದೆ.
ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ೨ ವರ್ಷದ ಹಿಂದೆ ಒಣ ಮತ್ತು ದ್ರವ್ಯ ತ್ಯಾಜ್ಯ ಘಟಕವು ಆರಂಭಗೊಂಡಿದ್ದು, ಗ್ರಾಮೀಣ ಭಾಗದ ಜನರಿಗೆ ತ್ಯಾಜ್ಯ ಸಂಗ್ರಹದ ಕುರಿತು ಸರಿಯಾದ ಮಾಹಿತಿ ಇಲ್ಲದೆ ನಿರ್ವಹಣೆ ಮಾತ್ರ ನಿಧಾನಗತಿಯಲ್ಲಿತ್ತು.
ಗ್ರಾಮದ ರಂಗನಕರೆಯ ವಿನೋದ ಕೊಠಾರಿಯವರಿಗೆ ಮದುವೆ ಆಗಿ ಬಂದ ವೀಣಾ ಒಂದು ವರ್ಷದಿಂದ ಘಟಕದ ಉಸ್ತುವಾರಿ ಹೊಂದಿದ ಬಳಿಕ ಗ್ರಾಮದ ಜನರಲ್ಲಿ ಸ್ವಚ್ಛ ಮತ್ತು ಪರಿಸರದ ಕುರಿತು ಅರಿವು ಮತ್ತು ಜಾಗೃತಿ ಹೆಚ್ಚಿದೆ .
೨ ಮಕ್ಕಳ ತಾಯಿ, ಸೈಕಲ್ ಕೂಡಾ ತುಳಿಯದ, ಎಸ್ ಎಸ್ ಎಲ್ ಸಿ ಶಿಕ್ಷಣ ಪಡೆದ ವೀಣಾ, ಸಂಜೀವಿನಿ ಸ್ವ ಸಹಾಯ ಸಂಘದ ಅನುಭವದಿಂದ, ಮನೆಯವರ ಸಹಕಾರ ಗ್ರಾಮಪಂಚಾಯತಿಯವರ ಶಿಫಾರಸ್ಸಿನ ಮೇರೆಗೆ ಉಡುಪಿ ಜಿಲ್ಲಾ ಪಂಚಾಯತಿ ವತಿಯಿಂದ ಬ್ರಹ್ಮಾವರ ರುಡ್ ಸೆಟ್ ಸಂಸ್ಥೆಯಲ್ಲಿ ೧ ತಿಂಗಳು ಮಹಿಳೆಯರಿಗೆ ೪ ಚಕ್ರದ ವಾಹನ ಚಾಲನಾ ತರಬೇತಿ ಪಡೆದುಕೊಂಡು ಇದೀಗ ಅವರೇ ವಾಹನ ಚಲಾಯಿಸಿಕೊಂಡು ಗ್ರಾಮದ ಮನೆ ಮನೆಯ ಕಸ ಸಂಗ್ರಹ ಮಾಡಿ ಗ್ರಾಮದ ಜನರ ಮತ್ತು ಮಹಿಳೆಯರ ಮನ ಗೆದ್ದಿದ್ದಾರೆ.
ಗ್ರಾಮ ಪಂಚಾಯತಿಯ ಒಂದು ಕಟ್ಟಡದಲ್ಲಿ ಸಂಗ್ರಹವಾದ ತ್ಯಾಜ್ಯವನ್ನು ಇಬ್ಬರು ಸಹಾಯಕರೊಂದಿಗೆ ಬೇರ್ಪಡಿಸಿ ಮಾರಾಟ ಮಾಡಿ ಬಂದ ಹಣ ಇವರ ಆದಾಯವಾಗಿದೆ.
ಗ್ರಾಮ ಪಂಚಾಯತಿ ೧೫ ನೇ ಹಣಕಾಸು ಯೋಜನೆಯಲ್ಲಿ ೨,೭೪೭೩೮ ರೂ ಮತ್ತು ಜಿಲ್ಲಾ ಪಂಚಾಯತಿ ಸ್ವಚ್ಛ ಭಾರತ್ ಅಭಿಯಾನದಲ್ಲಿ ೧,೮೫೨೬೨ ಮತ್ತು ಗ್ರಾಮ ಪಂಚಾಯತಿ ೩೦, ೯೯೯ ನೆರವಿನಿಂದ ವಾಹನ ಮತ್ತು ( ಇನ್ಸಿನ ರೇಟ್ )ಪ್ಯಾಡ್ ಬರ್ನ ಯಂತ್ರ ನೀಡಿದ್ದಾರೆ.
ರಸ್ತೆ , ಮನೆ, ಅಂಗಡಿಯ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಸೇರಿದಂತೆ ತ್ಯಾಜ್ಯ ಕಸವನ್ನು ಎಸೆದ ಕಸವೆ ಸಂಪನ್ಮೂಲವಾಗುವ ಪರಿಕಲ್ಪನೆಯನ್ನು ದೇಶದ ಪ್ರಧಾನಿ ನರೇಂದ್ರ ಮೋದೀಜಿಯವರ ಕಲ್ಪನೆಗೆ ಪ್ರತೀ ಮನೆ ಮತ್ತು ಗ್ರಾಮ ಸ್ವಚ್ಛವಾದರೇ ಮಾತ್ರ ದೇಶ ಸ್ವಚ್ಛವಾಗಲು ಸಾಧ್ಯ ಎನ್ನುವುದನ್ನು ಹನೆಹಳ್ಳಿ ಗ್ರಾಮ ಪಂಚಾಯತಿ ಮಾಡುತ್ತಿದೆ.
ಬೇರೆ ಗ್ರಾಮದವರು, ತ್ಯಾಜ್ಯ ನಿರ್ವಹಣೆಗೆ ಅನೇಕರು ಬಂದಿದ್ದರು. ಆದರೆ, ಊರ ಜನರಿಗೆ ಅಪರಿಚಿತರು. ವೀಣಾರವರು ಬಂದ ನಂತರ ಘಟಕ ಕ್ರೀಯಾಶೀಲವಾಗಿದೆ. ಜನರಲ್ಲಿ ಅರಿವು ಮತ್ತು ಜಾಗೃತಿಯೊಂದಿಗೆ ಲಾಭದತ್ತ ಮುಂದುವರಿಯುತ್ತಿದೆ.ಅರುಂಧತಿ ಏಸುಮನೆ, ಹನೆಹಳ್ಳಿ ಗ್ರಾಮಪಂಚಾಯತಿ ಅಭಿವೃದ್ಧಿ ಅಧಿಕಾರಿ

ನನಗೆ ಮೊದಲಿನಿಂದಲೂ ಚಾಲೆಂಜಿಂಗ್ ಕೆಲಸ ಅಂದರೆ ಇಷ್ಟ. ಇದೂ ಹಾಗೆ, ಡ್ರೈವಿಂಗ್ ಕಲಿತೆ. ಇದೀಗ ನಾನೇ ವಾಹನ ಚಾಲನೆ ಮಾಡಿಕೊಂಡು ಮನೆಗಳಿಗೆ ಹೋಗಿ ಜನರೊಂದಿಗೆ ಬೆರೆಯುವ ಮತ್ತು ಸ್ವಚ್ಛತೆಯ ಅರಿವಿನ ಜೊತೆ ಸ್ವಾವಲಂಬನೆಯ ನೆಮ್ಮದಿ ಇದೆ.ವೀಣಾ, ಚಾಲಕಿ ಮತ್ತು ಘಟಕದ ನಿರ್ವಾಹಕಿ

