ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ಆರ್ ಎಸ್ ಎಸ್ ಕೇಂದ್ರ ಕಚೇರಿಯಲ್ಲಿ ಇತ್ತೀಚಿನ ವರೆಗೂ ರಾಷ್ಟ್ರಧ್ವಜವನ್ನು ಹಾರಿಸದ ಬಿಜೆಪಿಯವರು ಅಂದು ಈದ್ಗಾ ಮೈದಾನ ವಿವಾದ ಎಬ್ಬಿಸಿ ಈಗ ಕಾಂಗ್ರೆಸ್ ರಾಷ್ಟ್ರೀಯ ನಾಯಕ ವೀರಪ್ಪ ಮೊಯ್ಲಿ ಅವರ ಬಗ್ಗೆ ಏನೇನೊ ಹೇಳಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ವೀರಪ್ಪ ಮೊಯ್ಲಿ ಏನು ಎಂದು ಕಾರ್ಕಳದ ಎಲ್ಲರಿಗೂ ಗೊತ್ತಿದೆ, ಭಾರತೀಯತೆ, ಸ್ವಾತಂತ್ರ್ಯ ಹೋರಾಟ, ಸ್ವಾತಂತ್ರ್ಯ ಅಂದರೆ ಬಿಜೆಪಿಯವರು ನಮಗೆ ಪಾಠ ಹೇಳುವ ಅಗತ್ಯ ಇಲ್ಲ ಎಂದು ಸಚಿವ ಸುನಿಲ್ ಕುಮಾರ್ ವಿರುದ್ಧ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಆರೋಪಗಳ ಸುರಿಮಳೆಗೈದರು.
ಅವರು ಹೆಬ್ರಿಯ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಆ ಕಾಲಕ್ಕೆ ಕಾರ್ಕಳ ಕ್ಷೇತ್ರದ ತುರ್ತು ಅವಶ್ಯಕತೆ ಮತ್ತು ಮೂಲ ಸೌಕರ್ಯಗಳನ್ನು ವೀರಪ್ಪ ಮೊಯ್ಲಿ ವಿಶೇಷ ಆದ್ಯತೆಯಲ್ಲಿ ಪೂರೈಸಿದ್ದಾರೆ.
ಅಂದು ಶಿಕ್ಷಣ, ಆರೋಗ್ಯ ಗ್ರಾಮೀಣ ಸಂಪರ್ಕ ರಸ್ತೆ ಮತ್ತು ಸೇತುವೆಯನ್ನು ವೀರಪ್ಪ ಮೊಯ್ಲಿ ಮಾಡಿದ್ದಾರೆ. ಪ್ರತಿ ವಾರ್ಡಿಗೆ ಒಂದರಂತೆ ಶಾಲೆಯನ್ನು ಅಂದಿನ ತುರ್ತು ಅವಶ್ಯಕತೆ ಎಂದು ಪರಿಗಣಿಸಲಾಗಿತ್ತು. ಶಾಲೆ, ಕಾಲೇಜು, ಆಸ್ಪತ್ರೆ, ಪದವಿ ಕಾಲೇಜು, ನವೋದಯ ವಿದ್ಯಾಲಯ, ಡ್ಯಾಮ್, ಸೇತುವೆಯನ್ನು ಯಾರು ಮಾಡಿದ್ದು? ಎಂದು ಮಂಜುನಾಥ ಪೂಜಾರಿ ಪ್ರಶ್ನಿಸಿದ್ದಾರೆ.
ತಮ್ಮ ಕ್ಷೇತ್ರದ ಸಮಗ್ರ ಅಭಿವೃದ್ದಿ ಮಾಡಿದ ವೀರಪ್ಪ ಮೊಯಿಲಿ ಕಾರ್ಕಳ ಕ್ಷೇತ್ರದಲ್ಲಿ ಸಂಚಾರ ಮಾಡುತ್ತಾರೆ. ತಮ್ಮ ತವರು ಕ್ಷೇತ್ರದಲ್ಲಿ ವೀರಪ್ಪ ಮೊಯ್ಲಿ ಜನರ ಬೇಟಿ ಮಾಡಿದರೇ ಏನು ಸಮಸ್ಯೆ. ಸುನಿಲ್ ಕುಮಾರ್ ಗೆ ವೀರಪ್ಪ ಮೊಯ್ಲಿ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇಲ್ಲ ಎಂದು ಮಂಜುನಾಥ ಪೂಜಾರಿ ಗರಂ ಆಗಿದ್ದಾರೆ.
ಸ್ವಾತಂತ್ರ್ಯ ಹೋರಾಟದ ಬಳಿಕ ದುರ್ಬಲವಾದ ಭಾರತವನ್ನು ಬ್ರಿಟಿಷರು ಕಾಂಗ್ರೇಸ್ ಕೈಗೆ ಕೊಟ್ಟು ಹೋಗಿದ್ದರು. ಜವಾಹರಲಾಲ್ ನೆಹರು ಅವರಿಂದ ಮನಮೋಹನ ಸಿಂಗ್ ತನಕ ವಿವಿಧ ಹಂತದಲ್ಲಿ ಸಮೃದ್ಧ ಬಲಿಷ್ಠ ಭಾರತವನ್ನು ಕಾಂಗ್ರೆಸ್ ಕಟ್ಟಿದೆ. ಕಾಂಗ್ರೆಸ್ ಕಟ್ಟಿದ ಬಲಿಷ್ಠ ಭಾರತದ ಮೇಲೆ ಬಿಜೆಪಿ ನಿಂತು ದಬ್ಬಾಳಿಕೆಯನ್ನು ಮಾಡುತ್ತಿದೆ. ಜನರಿಗೆ ಮೋಸ ಮಾಡುತ್ತಿದೆ. ಧರ್ಮ ಧರ್ಮಗಳ ನಡುವೆ ಕೋಮು ದ್ವೇಷವನ್ನು ತುಂಬಿ ಒಡೆದು ಆಳುತ್ತಿದೆ. ದೇಶಕ್ಕಾಗಿ ಅಂದು ಕಾಂಗ್ರೆಸ್ ಸ್ಥಾಪಿಸಿದ ಎಲ್ಲವನ್ನೂ ಬಿಜೆಪಿ ಮಾರಾಟ ಮಾಡಿದೆ. ಬಿಜೆಪಿ ಜನರ ಬದುಕಿಗೆ ಏನು ಮಾಡಿದೆ? ಜನರ ಬದುಕಿನಲ್ಲಿ ಚೆಲ್ಲಾಟ ಆಡುತ್ತಿದೆ. ಕಾಂಗ್ರೆಸ್ ನ ಜನಪರ ಯೋಜನೆಯನ್ನು ಹೆಸರು ಬದಲಿಸಿ ಮತ್ತೇ ಅದನ್ನೇ ನೀಡುತ್ತಿದೆ ಎಂದು ಮಂಜುನಾಥ ಪೂಜಾರಿ ಆರೋಪಿಸಿದರು.

ಅಂದು ಸ್ವಾತಂತ್ರ್ಯ ಹೋರಾಟವನ್ನು ವಿರೋಧಿಸಿದ ಬಿಜೆಪಿ ಸ್ವಾತಂತ್ರ್ಯ ಅಮೃತ ಮಹೋತ್ಸವ ರಂದು ನಾಟಕವಾಡುತ್ತಿದೆ. ಆರ್ ಎಸ್ ಎಸ್ ಅಂದಿನ ಅಜೆಂಡಾದಲ್ಲಿ ಸ್ವಾತಂತ್ರ್ಯ ಹೋರಾಟದ ಪ್ರಸ್ತಾಪವೇ ಇರಲಿಲ್ಲ. ಸ್ವಾತಂತ್ರ್ಯ ದೊರೆತಾಗ ಅಂದಿನ ಭಾರತದ ಅಂದಿನ ಸ್ಥಿತಿಯಂತೆಯೇ ಈಗ ಭಾರತದಲ್ಲಿ ಬಿಜೆಪಿಯ ಆಡಳಿತದ ಸ್ಥಿತಿಯಾಗಿದೆ. ಬಿಜೆಪಿಯಿಂದಾಗಿ ಭಾರತದ 75 ವರ್ಷ ಹಿಂದೆ ಹೋಗಿದೆ. ಬಿಜೆಪಿಯವರಿಗೆ ಅಭಿವೃದ್ಧಿ ಮತ್ತು ಜನರ ಕಷ್ಟ ಬೇಡ, ಭಾವನಾತ್ಮಕವಾಗಿ ಜನರನ್ನು ವಿಭಜಿಸಿ ಅಧಿಕಾರಕ್ಕೆ ಬಂದು ಸ್ವಂತದ ಅಭಿವೃದ್ಧಿ ಮಾತ್ರ ಎಂದರು.
ಕಾರ್ಕಳದಲ್ಲಿ ಕಾಂಗ್ರೆಸ್ ಏಳಿಗೆಯನ್ನು ಕಂಡು ಸುನಿಲ್ ಕುಮಾರ್ ಗೆ ಸಹಿಸಲು ಆಗುತ್ತಿಲ್ಲ. ಅದಕ್ಕಾಗಿ ಜನರ ದಾರಿ ತಪ್ಪಿಸಲು ಹೊರಟಿದ್ದಾರೆ ಎಂದು ಮಂಜುನಾಥ ಪೂಜಾರಿ ದೂರಿದರು.
ರಾಷ್ಟ್ರಧ್ವಜ ಮಾರಾಟ ಮಾಡಿ ಬಿಜೆಪಿ ಸರ್ಕಾರದಿಂದ ಹಣ ವಸೂಲಿ :
ಸ್ವಾತಂತ್ರ್ಯ ಅಮೃತ ಮಹೋತ್ಸವದ ಹೆಸರಿನಲ್ಲಿ ಸರ್ಕಾರ ರಾಷ್ಟ್ರಧ್ವಜವನ್ನು ಮಾರಾಟ ಮಾಡಿಸಿ ಹಣ ವಸೂಲಿ ಮಾಡುತ್ತಿದೆ. ದೇಶ ಪ್ರೇಮದ ನಾಟಕ ಆಡುತ್ತಿದೆ. ಬಿಜೆಪಿಯವರಿಗೆ ಮತ್ತು ಬಿಜೆಪಿ ಸರ್ಕಾರಕ್ಕೆ ನಿಜವಾಗಿ ಸ್ವಾತಂತ್ರ್ಯ ಹೋರಾಟ, ದೇಶದ ಮೇಲೆ ಪ್ರಿತಿಯಿದ್ದರೆ ಖಾದಿ ಮಂಡಳಿಯಲ್ಲಿ ಧ್ವಜ ಖರೀದಿಸಿ ಜನತೆಗೆ ಉಚಿತವಾಗಿ ಹಂಚಬೇಕಿತ್ತು. ವಿದೇಶಿ ಕಂಪೆನಿಯ ಧ್ವಜವನ್ನು ತರಿಸಲಾಗುತ್ತಿದೆ. ಇದನ್ನು ಕಾಂಗ್ರೆಸ್ ಮತ್ತು ಕಾಂಗ್ರೆಸ್ ಸರ್ಕಾರ ಮಾಡುತ್ತಿದ್ದರೆ ಇದೇ ಬಿಜೆಪಿಯವರು ದೇಶದ್ರೋಹದ ಆರೋಪ ಹೊರಿಸುತ್ತಿದ್ದರು. ರಾಷ್ಟ್ರಧ್ವಜ ಮಾರಾಟ ಮಾರಾಟ ಮಾಡಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿರುವುದು ದೇಶದ್ರೋಹದ ಕೆಲಸ ಎಂದು ಮಂಜುನಾಥ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಹೆಬ್ರಿ ಬ್ಲಾಕ್ ಪ್ರದಾನ ಕಾರ್ಯದರ್ಶಿ ಎಚ್. ಜನಾರ್ಧನ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಂಜನಿ ಹೆಬ್ಬಾರ್, ಪ್ರಮುಖರಾದ ಸಂತೋ ನಾಯಕ್, ವಿಶು ಕುಮಾರ್ ಮುದ್ರಾಡಿ, ಹರೀಶ ಕುಲಾಲ್ ಉಪಸ್ಥಿತರಿದ್ದರು.
