ಜೈಪುರ : ಉದಯಪುರ – ಜೈಪುರ ಮಾರ್ಗದ ವಂದೇ ಭಾರತ್ ರೈಲು ಅಪಘಾತವೊಂದು ತಪ್ಪಿದೆ. ರೈಲು ಚಾಲಕ ಲೋಕೋ ಪೈಲಟ್‌ನ ಸಮಯ ಪ್ರಜ್ಞೆಯಿಂದ ಈ ದುರಂತ ತಪ್ಪಿದೆ.
ಸೆಪ್ಟೆಂಬರ್ 24 ರಂದು ಪ್ರಧಾನಿ ಮೋದಿ ಅವರು ಚಾಲನೆ ನೀಡಿದ್ದ ಉದಯಪುರ – ಜೈಪುರ ಮಾರ್ಗದ ವಂದೇ ಭಾರತ್ ರೈಲು ಸಾಗಬೇಕಿದ್ದ ಹಳಿ ಮೇಲೆ ದೊಡ್ಡ ದೊಡ್ಡ ಕಲ್ಲುಗಳು ಹಾಗೂ ಕಬ್ಬಿಣದ ರಾಡ್ ಇಡಲಾಗಿತ್ತು. ಒಂದು ವೇಳೆ ಈ ವಸ್ತುಗಳ ಮೇಲೆ ರೈಲು ಸಾಗಿದ್ದರೆ ರೈಲು ಹಳಿ ತಪ್ಪುವ ಸಾಧ್ಯತೆ ಇತ್ತು. ಈ ಅನುಮಾನಾಸ್ಪದ ವಸ್ತುಗಳನ್ನು ಗಮನಿಸಿದ ಕೂಡಲೇ ರೈಲಿನ ಲೋಕೋ ಪೈಲಟ್ ತುರ್ತು ಬ್ರೇಕ್ ಹಾಕಿದ್ದಾರೆ ಹೀಗಾಗಿ, ದೊಡ್ಡ ದುರಂತವೊಂದು ತಪ್ಪಿದೆ.
ರೈಲನ್ನು ನಿಲ್ಲಿಸಿ ತಕ್ಷಣ ಲೋಕೋ ಪೈಲಟ್ ಈ ಸಂಬಂಧ ಸ್ಥಳೀಯ ರೈಲ್ವೆ ಅಧಿಕಾರಿಗಳ ಗಮನಕ್ಕೆ ತಂದರು. ಕೂಡಲೇ ರೈಲ್ವೆ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಇಟ್ಟಿಗೆ ಆಕಾರದಲ್ಲಿ ಇದ್ದ ದೊಡ್ಡ ದೊಡ್ಡ ಕಲ್ಲುಗಳನ್ನು ರೈಲು ಹಳಿ ಮೇಲೆ ಇಡಲಾಗಿತ್ತು. ಜೊತೆಯಲ್ಲೇ ರೈಲು ಹಳಿಗಳನ್ನು ಒಂದಕ್ಕೊಂದು ಬೆಸೆಯುವ ಮಾರ್ಗದಲ್ಲಿ ಕಬ್ಬಿಣದ ರಾಡುಗಳನ್ನು ಇರಿಸಲಾಗಿತ್ತು. ಅದನ್ನೂ ಕೂಡಾ ತೆರವು ಮಾಡಿದ ರೈಲ್ವೆ ಸಿಬ್ಬಂದಿ, ತೆರವು ಕಾರ್ಯಾಚರಣೆಯ ವಿಡಿಯೋ ಚಿತ್ರೀಕರಣವನ್ನೂ ಮಾಡಿದ್ದಾರೆ.
ಫಿಶ್ ಪ್ಲೇಟ್ ನಡುವೆ ರಾಡ್ :
ರೈಲು ಹಳಿಗಳ ಜೋಡಣೆ ವೇಳೆ ‘ಫಿಶ್ ಪ್ಲೇಟ್’ ಅಳವಡಿಕೆ ಮಾಡಲಾಗಿರುತ್ತದೆ. ರೈಲ್ವೆ ಲೇನ್‌ಗಳನ್ನು ಸಮಾನಾಂತರವಾಗಿ ಕಾಪಾಡುವಲ್ಲಿ ಈ ಫಿಶ್ ಪ್ಲೇಟ್‌ಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದರೆ, ಈ ಫಿಶ್ ಪ್ಲೇಟ್‌ಗಳ ನಡುವಲ್ಲೇ ಕಬ್ಬಿಣದ ರಾಡ್ ಇರಿಸಲಾಗಿತ್ತು. ಈ ಮೂಲಕ ರೈಲು ಸಾಗುವಾಗ ಹಳಿ ತಪ್ಪುವಂತೆ ಮಾಡಲು ಕುತಂತ್ರ ಮಾಡಲಾಗಿತ್ತು.
ಸೋಮವಾರ ಬೆಳಗ್ಗೆ 9.55ರ ಸುಮಾರಿಗೆ ಚಿತ್ತೋರ್‌ಘರ್ ಬಳಿ ರೈಲಿನ ಲೋಕೋ ಪೈಲಟ್‌ಗೆ ಹಳಿಯ ಮೇಲೆ ಸಂಶಯಾಸ್ಪದ ವಸ್ತುಗಳು ಇರೋದು ಕಂಡು ಬಂತು. ಕೂಡಲೇ ತಡ ಮಾಡದೆ ತುರ್ತು ಬ್ರೇಕ್ ಹಾಕಿದ್ದಾರೆ. ಕಲ್ಲುಗಳು ಹಾಗೂ ಕಬ್ಬಿಣದ ರಾಡಿನ ಮೇಲೆ ರೈಲು ಸಾಗುವ ಮುನ್ನವೇ ಬ್ರೇಕ್ ಹಾಕಲಾಗಿತ್ತು. ಹೀಗಾಗಿ, ಸಂಭಾವ್ಯ ದುರಂತವೊಂದು ತಪ್ಪಿತು.
ಪ್ರಧಾನಿ ಮೋದಿಯಿಂದ ಉದ್ಘಾಟನೆ :
ರೈಲ್ವೆ ಸಿಬ್ಬಂದಿ ಕಲ್ಲುಗಳು ಹಾಗೂ ಕಬ್ಬಿಣದ ರಾಡ್ ಅನ್ನು ರೈಲ್ವೆ ಹಳಿ ಮೇಲಿಂದ ತೆರವು ಮಾಡಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನೆಟ್ಟಿಗರು ಈ ಕೃತ್ಯ ಎಸಗಿದ ದುಷ್ಕರ್ಮಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಉದಯಪುರ ಹಾಗೂ ಜೈಪುರ ನಡುವಣ ವಂದೇ ಭಾರತ್ ರೈಲನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಅವರು ಸೆಪ್ಟೆಂಬರ್ 24 ರಂದು ಉದ್ಘಾಟಿಸಿದ್ದರು. ಎರಡೂ ನಗರಗಳ ನಡುವಣ 435 ಕಿ. ಮೀ. ದೂರವನ್ನು ಈ ರೈಲು ಕೇವಲ 6 ಗಂಟೆ 15 ನಿಮಿಷಗಳಲ್ಲೇ ಕ್ರಮಿಸುತ್ತದೆ. ವಂದೇ ಭಾರತ್ ಉದ್ಘಾಟನೆಗೆ ಮುನ್ನ ಈ ಮಾರ್ಗವನ್ನು ಕ್ರಮಿಸಲು ರೈಲುಗಳು 7 ಗಂಟೆಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದವು.
ವಂದೇ ಭಾರತ್ ರೈಲು ಗಂಟೆಗೆ 160 ಕಿ. ಮೀ. ವೇಗದಲ್ಲಿ ಸಂಚರಿಸುವ ಕಾರಣ, ಈ ರೀತಿಯ ದುಷ್ಕೃತ್ಯಗಳು ದೊಡ್ಡ ಅನಾಹುತವನ್ನೇ ಸೃಷ್ಟಿಸಬಲ್ಲವು. ಇದೇ ವರ್ಷ ಮೇ ತಿಂಗಳಲ್ಲಿ ಕೇರಳದಲ್ಲಿ ವಂದೇ ಭಾರತ್ ರೈಲಿನ ಮೇಲೆ ಕಲ್ಲೆಸೆಯಲಾಗಿತ್ತು. ರೈಲಿನ ಮೇಲೆ ಕಲ್ಲೆಸೆತ ಪ್ರಕರಣಗಳು ದೇಶಾದ್ಯಂತ ವರದಿಯಾಗಿವೆ.