ಉಡುಪಿ: ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಶಾಂತಿ ಕಾಪಾಡುವ ಉದ್ದೇಶದಿಂದ ಮಹಿಷ ದಸರಾ ಆಚರಣೆಯ ಪರ, ವಿರೋಧ ಪೋಸ್ಟರ್, ಬ್ಯಾನರ್, ಬಂಟಿಂಗ್ಸ್, ಅಳವಡಿಸುವುದು ಪ್ರತಿಭಟನೆ ಹಾಗೂ ಮೆರವಣಿಗೆ ನಡೆಸುವುದನ್ನು ನಿಷೇಧಿಸಿ, ಅ.14ರ ಬೆಳಗ್ಗೆ 6 ಗಂಟೆಯಿಂದ ಅ.15ರ ಸಂಜೆ 6 ಗಂಟೆಯವರೆಗೂ ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾ ಕುಮಾರಿ ಅವರು ಆದೇಶ ಹೊರಡಿಸಿದ್ದಾರೆ.
ಆದೇಶದಲ್ಲಿ ಏನಿದೆ ? :
ಮಹಿಷ ದಸರ ಆಚರಣೆ ಪರ/ವಿರೋಧದದ ಬಗ್ಗೆ, ಯಾವುದೇ ಪೋಸ್ಟರ್ ಬ್ಯಾನರ್, ಬಂಟಿಂಗ್, ಅಳವಡಿಸುವುದು ಪ್ರತಿಭಟನೆ / ಮೆರವಣಿಗೆಗಳನ್ನು: (ಅವಹೇಳನಕಾರಿಯಂತಹ ಯಾವುದೇ ಘೋಷಣೆಗಳು/ಭಾಷಣಗಳು ಪುಕಟಣೆಗಳು/ ಅವಾಚ್ಯ ಶಬ್ದಗಳ ಬಳಕೆ/ಪುಚೋದನಾಕಾರಿ ಭಾಷಣ/ ಗಾಯನ ಇತ್ಯಾದಿ ಚಟುವಟಿಕೆಗಳನ್ನು ನಿಷೇಧಿಸಿದೆ.
ಶಸ್ತ್ರಗಳು, ದೋಣಿಗಳು, ಕತ್ತಿಗಳು, ಈಟಿಗಳು, ಗದೆಗಳು, ಬಂದೂಕುಗಳು, ಚಾಕುಗಳು, ಕೋಲುಗಳ ಅಥವಾ ಲಾಠಿಗಳನ್ನು ಅಥವಾ ದೈಹಿಕ ಹಿಂಸೆಯನ್ನುಂಟು ಮಾಡುವ ಇತರ ಯಾವುದೇ ವಸ್ತುಗಳನ್ನು ಒಯ್ಯುವುದನ್ನು ನಿಷೇಧಿಸಿದೆ.
ಪಟಾಕಿಗಳನ್ನು ಸಿಡಿಸುವುದು, ಯಾವುದೇ ಕಾರಕ ಪದಾರ್ಥ ಅಥವಾ ಸ್ಫೋಟಕಗಳನ್ನು ಒಯ್ಯುವುದನ್ನು ನಿಷೇಧಿಸಿದೆ.
ಕಲ್ಲುಗಳನ್ನು ಅಥವಾ ಇತರ ಕ್ಷಿಪಣಿಗಳನ್ನು ಎಸೆಯುವ ಅಥವಾ ವೇಗದಿಂದ ಒಗೆಯುವ ಸಾಧನಗಳ ಅಥವಾ ಉಪಕರಣಗಳ ಒಯುವಿಕೆಯನ್ನು ಶೇಖರಿಸುವುದನ್ನು ಮತ್ತು ತಯಾರಿಸುವುದು ನಿಷೇಧಿಸಿದೆ.
ಪಚೋದಿಸಬಹುದಾದ ಬಹಿರಂಗ ಘೋಷಣೆಗಳನ್ನು ಮಾಡುವುದು ಹಾಡುಗಳನ್ನು ಹಾಡುವುದು, ಸಂಗೀತವನ್ನು ನುಡಿಸುವುದು, ಆವೇಶಭರಿತ ಭಾಷಣ ಮಾಡುವುದು, ಇಂಗಿತ ಸೂಚನೆಗಳ ಅಥವಾ ಅಂಕ ನಿರೂಪಣಿಗಳನ್ನು ಪ್ರಯೋಗ ಮಾಡುವುದು, ಮತ್ತು ಚಿತ್ರಗಳನ್ನು ಸಂಕೇತಗಳನ್ನು ಭಿತ್ತಿ ಪತ್ರಗಳನ್ನು ಆಥವಾ ಇತರೆ ಯಾವುದೇ ವಸ್ತು ಅಥವಾ ಪದಾರ್ಥಗಳನ್ನು ತಯಾರಿಸುವುದು, ಪ್ರದರ್ಶಿಸುವುದು ಅಥವಾ ಪ್ರಸಾರ ಮಾಡುವುದನ್ನು ನಿಷೇಧಿಸಿದೆ.
ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.