ಮೈಸೂರು: ವಿಶ್ವವಿಖ್ಯಾತ 414ನೇ ಮೈಸೂರು ದಸರಾ ಮಹೋತ್ಸವಕ್ಕೆ ಭಾನುವಾರ ಅದ್ಧೂರಿ ಚಾಲನೆ ಸಿಕ್ಕಿದೆ. ಬೆಳಗ್ಗೆ 10:15ರಿಂದ 10.36ರವರೆಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ನಾಡದೇವಿ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ ಮೂಲಕ ಸಂಗೀತ ನಿರ್ದೇಶಕ ಹಂಸಲೇಖ ಚಾಲನೆ ನೀಡಿದರು.
ಇದಕ್ಕೂ ಮೊದಲು ಹಂಸಲೇಖ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ ಮಹದೇವಪ್ಪ, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವಾರು ಗಣ್ಯರು ಅಲಂಕೃತ ಬೆಳ್ಳಿ ರಥದಲ್ಲಿ ಆಸೀನಳಾಗಿದ್ದ ಪಂಚಲೋಹದ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸಿದರು.
ಬಳಿಕ ಸಭಾ ಕಾರ್ಯಕ್ರಮದಲ್ಲಿ ದೀಪ ಬೆಳಗಿಸುವ ಮೂಲಕ ಸಂಗೀತ ನಿರ್ದೇಶಕ ಹಂಸಲೇಖ ಅವರು ದಸರಾಗೆ ಚಾಲನೆ ನೀಡಿದರು.
ಈ ವೇಳೆ ನಾಡಗೀತೆಯನ್ನು ಹಾಡಿ ಗೌರವ ಸಲ್ಲಿಸಲಾಯಿತು. ಸಚಿವರಾದ ಕೆ. ವೆಂಕಟೇಶ್ ,ಕೆ. ಜೆ. ಜಾರ್ಜ್, ಶಿವರಾಜ್ ತಂಗಡಗಿ, ಸಂಸದ ಪ್ರತಾಪ್ ಸಿಂಹ, ಮೈಸೂರು ಮೇಯರ್ ಶಿವಕುಮಾರ್, ಶಾಸಕ ಜಿ.ಟಿ. ದೇವೇಗೌಡ ಸೇರಿದಂತೆ ಇತರ ಗಣ್ಯರು ಭಾಗಿಯಾಗಿದ್ದರು.