ನವದೆಹಲಿ: ಕತಾರ್‌ನಲ್ಲಿ ಎಂಟು ಮಂದಿ ಭಾರತೀಯ ಮಾಜಿ ಯೋಧರಿಗೆ ಮರಣದಂಡನೆ ಶಿಕ್ಷೆ ಪ್ರಕಟಿಸಲಾಗಿದೆ.
ಅಲ್ ದಹ್ರಾ ಕಂಪನಿಯ 8 ಮಂದಿ ಭಾರತೀಯ ಉದ್ಯೋಗಿಗಳು ಭಾಗಿಯಾಗಿದ್ದ ಪ್ರಕರಣದ ವಿಚಾರಣೆ ನಡೆಸಿದ ಕತಾರ್‌ನ ನ್ಯಾಯಾಲಯ ಗುರುವಾರ ತೀರ್ಪು ಪ್ರಕಟಿಸಿದೆ. ಎಂಟು ಮಂದಿಗೆ ಮರಣ ದಂಡನೆ ಶಿಕ್ಷೆ ವಿಧಿಸಿ ಆದೇಶಿಸಿದೆ.
ಪ್ರಮುಖ ಭಾರತೀಯ ಯುದ್ಧನೌಕೆಗಳಿಗೆ ಕಮಾಂಡರ್ ಆಗಿರುವ ಅಧಿಕಾರಿಗಳು ಸೇರಿದಂತೆ ಎಂಟು ಮಂದಿ ಕತಾರ್‌ನ ಸಶಸ್ತ್ರ ಪಡೆಗಳು ಮತ್ತು ಭದ್ರತಾ ಏಜೆನ್ಸಿಗಳಿಗೆ ತರಬೇತಿ ಮತ್ತು ಸಂಬಂಧಿತ ಸೇವೆಗಳನ್ನು ಒದಗಿಸುವ ಖಾಸಗಿ ಸಂಸ್ಥೆಯಾದ ಅಲ್ ದಹ್ರಾ ಗ್ಲೋಬಲ್ ಟೆಕ್ನಾಲಜೀಸ್ ಮತ್ತು ಕನ್ಸಲ್ಟೆನ್ಸಿ ಸರ್ವಿಸಸ್‌ಗಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಬಂಧಿತ ಭಾರತೀಯರಲ್ಲಿ ನಿವೃತ್ತ ಕಮಾಂಡರ್ ಪೂರ್ಣೇಂದು ತಿವಾರಿ ಅವರು ಅಲ್ ದಹ್ರಾ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು ಮತ್ತು ನೌಕಾಪಡೆಯೊಂದಿಗೆ ಸೇವೆ ಸಲ್ಲಿಸುತ್ತಿರುವಾಗ ಹಲವಾರು ಯುದ್ಧನೌಕೆಗಳಿಗೆ ಆದೇಶಿಸಿದ್ದರು. ಈ ಎಂಟು ಮಂದಿ ಮೇಲೆ ಬೇಹುಗಾರಿಕೆ ಆರೋಪ ಹೊರಿಸಿ ಬಂಧಿಸಲಾಗಿತ್ತು. ಹಲವಾರು ಬಾರಿ ಅವರ ಜಾಮೀನು ಅರ್ಜಿಗಳನ್ನು ತಿರಸ್ಕರಿಸಲಾಯಿತು ಮತ್ತು ಅವರ ಬಂಧನವನ್ನು ಕತಾರ್ ಅಧಿಕಾರಿಗಳು ವಿಸ್ತರಿಸಿದ್ದರು. ಇದೀಗ ಕೋರ್ಟ್ ಶಿಕ್ಷೆ ಪ್ರಕಟಿಸಿದೆ.
ಭಾರತಕ್ಕೆ ಆಘಾತ :
ಕತಾರ್ ಕೋರ್ಟ್‌ನ ತೀರ್ಪಿಗೆ ಕೇಂದ್ರ ಸರ್ಕಾರ ಆಘಾತ ವ್ಯಕ್ತಪಡಿಸಿದ್ದು, ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ವಿದೇಶಾಂಗ ಸಚಿವಾಲಯ, ಮರಣ ದಂಡನೆ ಶಿಕ್ಷೆಯ ಕುರಿತು ಪ್ರಾಥಮಿಕ ಮಾಹಿತಿ ನಮಗೆ ಲಭ್ಯವಾಗಿದೆ. ಮರಣದಂಡನೆ ತೀರ್ಪು ನಮಗೆ ಆಘಾತ ಉಂಟುಮಾಡಿದೆ. ತೀರ್ಪಿನ ವಿವರಕ್ಕಾಗಿ ಕಾಯುತ್ತಿದ್ದೇವೆ. ಕುಟುಂಬ ಸದಸ್ಯರು ಮತ್ತು ಕಾನೂನು ತಂಡದೊಂದಿಗೆ ಸಂಪರ್ಕದಲ್ಲಿದ್ದೇವೆ. ಎಲ್ಲ ಕಾನೂನು ಆಯ್ಕೆಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ವಿದೇಶಾಂಗ ಸಚಿವಾಲಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಮುಂದುವರೆದು, ಈ ಪ್ರಕರಣಕ್ಕೆ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದ್ದು, ನಿಕಟವಾಗಿ ಪರಿಶೀಲಿಸುತ್ತಿದ್ದೇವೆ. ಎಲ್ಲ ರೀತಿಯ ರಾಯಭಾರಿ ನೆರವು ಮತ್ತು ಕಾನೂನು ನೆರವು ಒದಗಿಸುವುದನ್ನು ಮುಂದುವರಿಸುತ್ತೇವೆ. ಕತಾರ್ ಅಧಿಕಾರಿಗಳೊಂದಿಗೆ ಚರ್ಚೆ ಮಾಡುತ್ತೇವೆ. ಪ್ರಕರಣವು ಗೌಪ್ಯ ಸ್ವರೂಪದ ಕಾರಣ, ಈ ಹಂತದಲ್ಲಿ ಯಾವುದೇ ಹೆಚ್ಚಿನ ಪ್ರತಿಕ್ರಿಯೆ ನೀಡುವುದು ಸೂಕ್ತವಲ್ಲ ಎಂದೂ ಸಚಿವಾಲಯ ಮಾಹಿತಿ ನೀಡಿದೆ.

ಗೌಪ್ಯವಾಗಿ ಸೆರೆಯಲ್ಲಿರಿಸಿದ್ದ ಕತಾರ್ :
ಕತಾರ್ ಮತ್ತು ಭಾರತೀಯ ಅಧಿಕಾರಿಗಳು 8 ಮಂದಿಯ ವಿರುದ್ಧದ ಆರೋಪಗಳ ವಿವರಗಳನ್ನು ಎಂದಿಗೂ ಭಾರತಕ್ಕೆ ಒದಗಿಸಿಲ್ಲ. ಕತಾರ್ ಅಧಿಕಾರಿಗಳು ದೀರ್ಘಾವಧಿಯಿಂದ ಆರೋಪಿಗಳನ್ನು ಏಕಾಂತ ಸೆರೆಯಲ್ಲಿ ಇರಿಸಿದ್ದರು. ಒಬ್ಬ ಅಧಿಕಾರಿಯ ಸಹೋದರಿ ಮೀಟೂ ಭಾರ್ಗವ ತನ್ನ ಸಹೋದರನನ್ನು ಮರಳಿ ಕರೆತರಲು ಭಾರತ ಸರ್ಕಾರದಿಂದ ಸಹಾಯವನ್ನು ಕೋರಿದ್ದರು ಎಂದು ಎಎನ್‌ಐ ವರದಿ ಮಾಡಿದೆ.
ಜೂನ್ 8 ರಂದು ಟ್ವಿಟರ್ ನಲ್ಲಿನ ಪೋಸ್ಟ್‌ನಲ್ಲಿ ಪ್ರಕರಣದಲ್ಲಿ ಮಧ್ಯಪ್ರವೇಶಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದರು.
Just in: Qatar hands the death sentence to 8 ex Indian sailors in its custody; India says "shocked", in touch with family members and the legal team. MEA response: pic.twitter.com/zVv7k09Qsp— Sidhant Sibal (@sidhant) October 26, 2023
