ರಿಷಭ್ ನಾಭಿಯ ಆಳದಿಂದ ಬಂದ ಈ ಸದ್ದು ಇನ್ನು ಕೆಲದಿನಗಳಾದರೂ ಕಿವಿಯಲ್ಲಿ ಗುಯ್ಗುಡುತ್ತಿರುತ್ತದೆ. ಕಾಂತಾರ- ಒಂದು ಅನುಭೂತಿ. ಕೆಲವು ಸಿನಿಮಾಗಳನ್ನು ನೋಡುತ್ತೇವೆ, ಇನ್ನು ಕೆಲವನ್ನು ಅನುಭವಿಸುತ್ತೇವೆ. ಇದು ಎರಡನೇ ಕೆಟಗರಿಗೆ ಸೇರಿದ ಚಿತ್ರ.
ದಕ್ಷಿಣ ಕನ್ನಡ-ಮಲೆನಾಡಿನ ಪ್ರಾಂತ್ಯಗಳಲ್ಲಿ 90ರ ದಶಕದಲ್ಲಿ ಬೆಳೆದ ಹುಡುಗರಿಗೆ, ದಂತಕಥೆಗಳು ಹೊಸದಲ್ಲ. ದೈವ ದೇವರುಗಳು ಜಾತ್ರೆ ಕೋಲ ನೇಮೋತ್ಸವಗಳು ನಮ್ಮ ದೈನಿಕದ ಭಾಗವೇ ಆಗಿದ್ದವು. ಮಧ್ಯರಾತ್ರಿಯ ತಾಸೆಯ ಪೆಟ್ಟು- ಪೆಟ್ರೋಮ್ಯಾಕ್ಸು ದೀಪದ ಹಿಸ್ಸೆನ್ನುವ ಸದ್ದಿನ ಜೊತೆಗೆ ಕಡು ಕತ್ತಲಿನ ಮಧ್ಯ ಬೆಳಗುತ್ತಿರುವ, ಧುತ್ತನೆ ಅಂದು ತಾನೇ ಎದ್ದಿರುವ ಹೊಸದೊಂದು ಮಾಯಾಲೋಕದ ಹಿನ್ನೆಲೆಯಲ್ಲಿ, ಬೇರೆಯದೇ ಪ್ರಪಂಚದ ಜೊತೆಗೆ ಸಂಪರ್ಕ ಹೊಂದಿರಬಹುದಾದ ದೈವವೊಂದು ತನ್ನದೇ ಲಹರಿಯಲ್ಲಿ ತಾಳಕ್ಕೆ ತಕ್ಕ ಹಾಗೆ ಕುಣಿಯುತ್ತ, ಯಾರನ್ನೋ ಗದರುತ್ತ ಇನ್ನಾರಿಗೋ ಶಭಾಷೆನ್ನುತ್ತ- ಅದರ ಎದುರು ಕೈ ಮುಗಿದು ನಿಂತಿರುವ ಹುಲುಮಾನವರನ್ನು ಕುಡಿಗಣ್ಣಿನಲ್ಲೇ ಅಳತೆ ಮಾಡಿ ನಿವಾಳಿಸಿ ಬಿಸಾಕುತ್ತಿದ್ದರೆ, ರೋಮಾಂಚನ ಅದು!
ಆದರೆ ಇಂತದೊಂದು ಮಾಯಾ ಪ್ರಪಂಚವನ್ನು ತೆರೆಯ ಮೇಲೆ ತರಬೇಕು ಎಂದರೆ- ಅದಕ್ಕೆ ಅಷ್ಟೇ ತೀವ್ರ ಸಿದ್ಧತೆ ಬೇಕು- ಅಷ್ಟೇ ಶ್ರದ್ಧೆ ಇರಬೇಕು. ಕಾಂತಾರದ ಟ್ರೈಲರ್ ನೋಡಿದಾಗಲೇ ಈ ಕುರಿತು ಸಣ್ಣದೊಂದು ಆಸೆ ಕುದುರಿದ್ದರೂ- ಅದು ಇಂಥ ದೊಡ್ಡ ಪ್ರಯಾಣದಲ್ಲಿ ತೆರೆ ಮೇಲೆ ಬಂದೀತು ಎಂಬ ಕಲ್ಪನೆ ಇರಲಿಲ್ಲ.

ಒಂದು ಊರು- ಅಲ್ಲಿನ ಹತ್ತು ಹಲವು ಪಾತ್ರಗಳು- ಪ್ರತೀ ಪಾತ್ರಕ್ಕೂ ಒಂದು ಹಿನ್ನೆಲೆ ಕಥೆ. ಅವರಿಗೊಂದು Story Arch. ಚೂಟಿ ಚುರುಕು ಸಂಭಾಷಣೆ. ತೊಂಬತ್ತರ ದಶಕದ್ದೇ ಊರು ಅಂತ ಅನ್ನಿಸುವ ಜಾಗದ ಆಯ್ಕೆ- ಕಂಬಳ- ಕೋಲ- ಹಳೆಯ ಮಣ್ಣಿನ ಮನೆಗಳು-ಆಹಾರ ಪದ್ದತಿ- ಮನೆಯೊಳಗಿನ ಪ್ರಾಪರ್ಟಿಗಳು- ಎಲ್ಲದರಲ್ಲೂ ಕುಸುರಿ ಕೆಲಸ ಎದ್ದು ಕಾಣುತ್ತದೆ. ಕೃತಕ ಅನ್ನಿಸದ ಕಾಡಿನ ಮೂಡು ಹಿಡಿದದ್ದೂ ಚಂದವೇ!
ಗಂಭೀರ ಸನ್ನಿವೇಶಗಳಲ್ಲೂ ಸಣ್ಣದಾಗಿ ಬಂದು ಹೋಗುವ ಹಿತಮಿತವಾದ One Liner ಗಳು,ರಿಷಭ್ ತಾವೇ ಸಿನಿಮಾ ಹೀರೋ ಆಗಿದ್ದರೂ:ತಾನಿರುವ ಸನ್ನಿವೇಶಗಳಲ್ಲಿ,ಇತರ ದೃಶ್ಯಗಳಲ್ಲಿ ಉಳಿದ ಪಾತ್ರಗಳನ್ನೂ ಬೆಳೆಸಿರುವ ಪರಿ – ಮಾದರಿ.
ಒಳ್ಳೆಯವರಂತೆ ಕಾಣುವ ಕೆಟ್ಟವರು, ಕೆಟ್ಟವರಂತೆ ಕಾಣುವ ಒಳ್ಳೆಯವರು, ಮನುಷ್ಯ ಮನುಷ್ಯನ ನಡುವಿನ ತಿಕ್ಕಾಟ- ಪ್ರಕೃತಿ ಮನುಷ್ಯನ ನಡುವಿನ ಸಂಘರ್ಷಗಳ ಕತೆಗಳು ಬಹಳಷ್ಟು ಬಂದು ಹೋಗಿವೆ. – ಅದಕ್ಕೊಂದು ದೈವತ್ವವನ್ನು ಲೇಪಿಸಿ- ಅದನ್ನ ಅಷ್ಟೇ ಸಮರ್ಥವಾಗಿ ದೃಶ್ಯಗಳ ಮೂಲಕ ಹೆಣೆದಿದ್ದು ಪರಿಣಾಮಕಾರಿಯಾಗಿದೆ.
ನಾನು ಕಥೆಯ ಬಗ್ಗೆ ಏನನ್ನೂ ಹೇಳಲು ಹೋಗುವುದಿಲ್ಲ. ಸಿನಿಮಾ ನೋಡಿ. ಈಗಾಗಲೇ ಬಹಳ ಮಂದಿ ಕ್ಲೈಮ್ಯಾಕ್ಸ್ ನ ರಿಷಭ್ ಅಭಿನಯದ ಬಗ್ಗೆ ಬರೆದಿದ್ದಾರೆ. ಹಾಗೆಲ್ಲ ಸುಮ್ ಸುಮ್ನೇ ಅಭಿನಯಿಸೋದಕ್ಕೆ ಸಾಧ್ಯವೇ ಇಲ್ಲ- ದೈವವೇ ಮೈ ಮೇಲೆ ಬರದೇ ಹೋದರೆ! ಅಷ್ಟೇ.
ಅಜನೀಶ್ ಲೋಕನಾಥ್ರ ಹಿನ್ನೆಲೆ ಸಂಗೀತ ಮತ್ತು ಅರವಿಂದ ಕಶ್ಯಪ್ ಛಾಯಾಗ್ರಹಣ- ಹಬ್ಬ! ರಾತ್ರಿಯ ಹೊತ್ತಿನ ದೈವದ ಕೋಲದ ದೃಶ್ಯಗಳು ಕಣ್ಣಿಗೆ ಕಟ್ಟುವಂತಿದೆ.

ಮೊದಲೇ ಹೇಳಿದ ಹಾಗೆ- ಒಂದೊಳ್ಳೆ ಅನುಭೂತಿಗಾಗಿ ಈ ಸಿನಿಮಾ ನೋಡಿ. ಮತ್ತಿದು, ಥಿಯೇಟರ್ನಲ್ಲೇ ನೋಡಬೇಕಾದ ಚಿತ್ರ!
4.5 Stars/ 5
#Rishab Shetty #Ajaneesh Loknath #Ramdas ಮಿಮ್
ಶ್ರೀನಿಧಿ ಡಿ ಎಸ್
