ಚಂದನವನ : ರಿಷಬ್ ಶೆಟ್ಟಿ ಅವರ ‘ಕಾಂತಾರ’ವನ್ನು ನೋಡಿ ಮೆಚ್ಚಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಹೊಗಳಿಕೆಯ ಮಾತುಗಳನ್ನಾಡಿದ್ದರು. ಈ ಹಿನ್ನೆಲೆಯಲ್ಲಿ ನಟ ರಿಷಬ್ ಶೆಟ್ಟಿ ಅವರು ಶುಕ್ರವಾರ ಚೆನ್ನೈನ ಅವರ ನಿವಾಸದಲ್ಲಿ ರಜನಿಕಾಂತ್ ಅವರನ್ನು ಭೇಟಿಯಾಗಿದ್ದಾರೆ.
ಇತ್ತೀಚೆಗಷ್ಟೆ ಕಾಂತಾರ ನೋಡಿದ್ದ ರಜನಿಕಾಂತ್ ಅವರು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ತಿಳಿದಿರುವುದಕ್ಕಿಂತ ತಿಳಿಯದಿರುವುದು ಬಹಳಷ್ಟಿರುತ್ತವೆ. ಹೊಂಬಾಳೆ ಫಿಲ್ಮ್ಸ್, ರಿಷಬ್ ಶೆಟ್ಟಿ ಉತ್ತಮ ಸಿನಿಮಾ ನೀಡಿದ್ದಾರೆ. ರಿಷಬ್ ನಟನೆ, ನಿರ್ದೆಶನ, ಬರವಣಿಗೆಗೆ ಹ್ಯಾಟ್ಸಪ್. ಮೈನವಿರೇಳಿಸಿರುವ ಅನುಭವ ನೀಡಿದೆ. ತಂಡಕ್ಕೆ ಶುಭಾಶಯಗಳು ಎಂದಿದ್ದರು.
ತಲೈವಾ ಮೆಚ್ಚುಗೆಯ ಮಾತುಗಳಿಗೆ ರಿಷಬ್ ಶೆಟ್ಟಿ, ‘ಸರ್ ನೀವು ಭಾರತದ ದೊಡ್ಡ ಸೂಪರ್ಸ್ಟಾರ್. ಬಾಲ್ಯದಿಂದಲೂ ನಾನು ನಿಮ್ಮ ಅಭಿಮಾನಿ. ನಿಮ್ಮ ಮೆಚ್ಚುಗೆಯಿಂದ ನನ್ನ ಕನಸು ನನಸಾದಂತಾಗಿದೆ. ಸ್ಥಳೀಯ ಕಥೆಗಳನ್ನು ಆಯ್ಕೆ ಮಾಡಿಕೊಳ್ಳಲು ನೀವು ನನಗೆ ಪ್ರೇರಣೆಯಾಗಿದ್ದೀರಿ’ ಎಂದು ಪ್ರತಿಕ್ರಿಯೆ ನೀಡಿದ್ದರು.

ಇದೀಗ ರಿಷಬ್ ಶೆಟ್ಟಿ ಚೆನ್ನೈನಲ್ಲಿ ರಜನಿಕಾಂತ್ ಅವರನ್ನು ಭೇಟಿಯಾಗಿದ್ದಾರೆ. ಭೇಟಿಯ ಚಿತ್ರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ನೀವು ಒಂದ್ ಸಲ ಹೊಗಳಿದ್ರೆ… ನೂರು ಸಲ ಹೊಗಳ್ದಂಗೆ ನಮಗೆ. ಧನ್ಯವಾದಗಳು ರಜನಿಕಾಂತ್ ಸರ್. ನಮ್ಮ ಕಾಂತಾರ ಚಿತ್ರ ನೋಡಿ ನೀವು ಮೆಚ್ಚಿದ್ದಕ್ಕೆ ನಾವು ಸದಾ ಆಭಾರಿ’ ಎಂದು
ಬರೆದುಕೊಂಡಿದ್ದಾರೆ.
