ಕುಂದಾಪುರ: ಜಿ.ಸಿ ಮೂವಿಸ್ ಕುಂದಾಪುರ ಬ್ಯಾನರ್‍ನಡಿಯಲ್ಲಿ ದಿ ಸ್ಟ್ರೇಂಜ್ ಕೇಸ್ ಆಫ್ ಕುಂದಾಪುರ ಚಲನಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದ ಕುಂದಾಪುರದ ಕುಂದೇಶ್ವರ ದೇವಸ್ಥಾನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ, ಟ್ರೈಲರ್ ಬಿಡುಗಡೆಗೊಳಿಸಿ ಮಾತನಾಡಿದ ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ, ಕುಂದಾಪುರ ಭಾಗದ ಪ್ರತಿಭೆಗಳು ಚಲನಚಿತ್ರ ನಿರ್ಮಿಸುವುದರಿಂದ ಈ ಪರಿಸರದ ವಿಶೇಷತೆಗಳನ್ನು ಬಳಸಿಕೊಳ್ಳಲು ಸಾಧ್ಯ. ಕುಂದಾಪುರ ಪರಿಸರದಲ್ಲಿ ಸಾಕಷ್ಟು ಪ್ರವಾಸೋಧ್ಯಮವಾಗಿ ಗಮನ ಸಳೆಯುವ ವಿಶಿಷ್ಠವಾದ ಸ್ಥಳಗಳಿವೆ. ಅವುಗಳನ್ನು ಚಲನಚಿತ್ರಗಳಲ್ಲಿ ತೋರಿಸಿದಾಗ ಆ ಸ್ಥಳಗಳು ಪ್ರಸಿದ್ಧವಾಗುತ್ತವೆ. ಹಾಗೆಯೇ ಈ ಭಾಗದ ಅಭಿನಯ ಆಸಕ್ತ ಪ್ರತಿಭೆಗಳಿಗೂ ಅವಕಾಶ ಸಿಗುತ್ತದೆ. ಓಂ ಗುರು, ಚಂದ್ರಶೇಖರ ಹಾಗೂ ಅವರ ತಂಡದ ಪ್ರಯತ್ನ ಯಶಸ್ಸು ಗಳಿಸಲಿ ಇನ್ನೂ ಹೆಚ್ಚು ಹೆಚ್ಚು ಚಿತ್ರಗಳು ಇವರಿಂದ ಮೂಡಿ ಬರಲಿ ಎಂದರು.
ಈಗಾಗಲೇ ಕುಂದಾಪುರ ಜಿಲ್ಲೆ ರಚನೆಯ ಬಗ್ಗೆ ಹೋರಾಟಗಳು ಆರಂಭವಾಗಿವೆ. ಉಪ ವಿಭಾಗಾಧಿಕಾರಿಗಳ ಕಚೇರಿ ಇದ್ದ ಕುಂದಾಪುರವೇ ಜಿಲ್ಲಾ ಕೇಂದ್ರವಾಗಬೇಕಾಗಿತ್ತು. ಆದರೆ ಆಗ ಉಡುಪಿ ಜಿಲ್ಲಾ ಕೇಂದ್ರವಾಯಿತು. ಸೀತಾನದಿಯಿಂದ ಇಚೆ ವಿಶಿಷ್ಠವಾದ ಭಾಷೆ, ಜೀವನ ಶೈಲಿಯನ್ನು ಕಾಣುತ್ತೇವೆ. ನೆರೆಯ ಭಟ್ಕಳ, ಹೊಸನಗರ ತಾಲೂಕಿನ ಭಾಗಗಳನ್ನು ಸೇರಿಸಿಕೊಂಡರೆ ಕುಂದಾಪುರವನ್ನು ಜಿಲ್ಲೆ ಮಾಡಲು ಸಾಧ್ಯ. ನಮ್ಮ ಬೇಡಿಕೆಯನ್ನು ಸರ್ಕಾರದ ಗಮನ ತಂದಿದ್ದೇವೆ ಎಂದು ಅಪ್ಪಣ್ಣ ಹೆಗ್ಡೆ ಹೇಳಿದರು.
ಮನು ಹಂದಾಡಿ, ಉದ್ಯಮಿ ಪ್ರವೀಣ್ ಕುಮಾರ್, ನಟ, ನಿರ್ದೇಶಕ ಓಂ ಗುರು, ಚಿತ್ರ ನಿರ್ಮಾಪಕ ಚಂದ್ರಶೇಖರ್, ಸಂಗೀತ ನಿರ್ದೇಶಕ ಉತ್ತಮ್ ಸಾರಂಗ, ನಟ ರಾಹುಲ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.
ಸೌಮ್ಯಶ್ರೀ ಹಾಗೂ ಸಂದೇಶ ಶೆಟ್ಟಿ ಸಲ್ವಾಡಿ ಕಾರ್ಯಕ್ರಮ ನಿರ್ವಹಿಸಿದರು.
