ಮಿಜೋರಾಂ ವಿಧಾನಸಭೆಯ ನಡೆದ ಚುನಾವಣಾ ಫಲಿತಾಂಶ ಹೊರ ಬಿದ್ದಿದೆ. ಝೋರಾಂ ಪೀಪಲ್ಸ್ ಮೂವ್ಮೆಂಟ್ (ZPM) ಬಹುಮತ ಗಳಿಸಿದೆ. 40 ಸ್ಥಾನಗಳಲ್ಲಿ 27 ಸ್ಥಾನಗಳನ್ನ ಗೆದ್ದಿದೆ. ಮಿಜೋ ನ್ಯಾಷನಲ್ ಫ್ರಂಟ್ (MNF) ಪಕ್ಷವು 10 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. 2 ಕ್ಷೇತ್ರಗಳಲ್ಲಿ ಬಿಜೆಪಿ (BJP), 1 ಕ್ಷೇತ್ರದಲ್ಲಿ ಮಾತ್ರವೇ ಕಾಂಗ್ರೆಸ್ ಪ್ರಾಬಲ್ಯ ಮೆರೆದಿದೆ.
ಝಡ್ಪಿಎಂ ವಿಜೇತರಲ್ಲಿ ಪಕ್ಷದ ಸಿಎಂ ಅಭ್ಯರ್ಥಿ ಲಾಲ್ದುಹೋಮಾ ಗೆಲುವು ಕಂಡಿದ್ದಾರೆ. ಅವರು ತಮ್ಮ ಎಂಎನ್‌ಎಫ್ ಪ್ರತಿಸ್ಪರ್ಧಿ ಜೆ ಮಾಲ್ಸಾವ್ಮ್ಜುವಾಲಾ ವಾಂಚಾಂಗ್ ಅವರನ್ನು 2,982 ಮತಗಳಿಂದ ಸೋಲಿಸುವ ಮೂಲಕ ಸೆರ್ಚಿಪ್ ಸ್ಥಾನವನ್ನು ಗೆದ್ದಿದ್ದಾರೆ.
ಕೊಲಾಸಿಬ್, ಚಲ್ಫಿಲ್ಹ್, ತಾವಿ, ಐಜ್ವಾಲ್ ಉತ್ತರ-2, ಐಜ್ವಾಲ್ ಪಶ್ಚಿಮ-1, ಐಜ್ವಾಲ್ ಪಶ್ಚಿಮ-2, ಐಜ್ವಾಲ್ ಪಶ್ಚಿಮ-3, ಐಜ್ವಾಲ್ ದಕ್ಷಿಣ-1, ಐಜ್ವಾಲ್ ದಕ್ಷಿಣ-3, ಲೆಂಗ್ಟೆಂಗ್, ತುಯಿಚಾಂಗ್, ಚಂಫೈ ಉತ್ತರ, ತುಯಿಕುಮ್, ಹ್ರಾಂಗ್ತುರ್ಜೊ, ದಕ್ಷಿಣ ತುಯಿಪುಯಿ, ಲುಂಗ್ಲೈ ಪಶ್ಚಿಮ, ಲುಂಗ್ಲೈ ದಕ್ಷಿಣ, ಲಾಂಗ್ಟಲೈ ಪೂರ್ವದಲ್ಲಿ ಝಡ್ಪಿಎಂ ಗೆದ್ದಿದೆ.
ಹೊಸದಾಗಿ ಸ್ಥಾಪನೆಗೊಂಡಿದ್ದ ಝೋರಾಮ್ ಪೀಪಲ್ಸ್ ಮೂವ್ಮೆಂಟ್ 2018ರ ಚುನಾವಣೆಯಲ್ಲಿ ಕೇವಲ 8 ಸ್ಥಾನ ಗೆದ್ದಿತ್ತು. MNF 26 ಸ್ಥಾನಗಳಲ್ಲಿ ಗೆದ್ದು ಅಧಿಕಾರ ಹಿಡಿದಿತ್ತು. ಕಾಂಗ್ರೆಸ್ ಕೇವಲ 5 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಆದ್ರೆ ಝೋರಾಮ್ ಪೀಪಲ್ಸ್ ಮೂವ್ಮೆಂಟ್ ತನ್ನ 2ನೇ ಅವಧಿಯ ಚುನಾವಣೆಯಲ್ಲೇ ಬಹುಮತ ಪಡೆದು ಅಧಿಕಾರಕ್ಕೆ ಬಂದಿರುವುದು ವಿಶೇಷ.