ಮುಂಬೈ : ಐಟಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಅವಳಿ ಸಹೋದರಿಯರು ಒಂದೇ ವ್ಯಕ್ತಿಯನ್ನು ಮದುವೆ ಆಗಿರುವ ಘಟನೆ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಮಲ್ಶಿರಸ್ ತಾಲೂಕಿನ ಅಕ್ಲುಜ್ ಎಂಬ ಗ್ರಾಮದಲ್ಲಿ ನಡೆದಿದೆ. ಶುಕ್ರವಾರ ಶಾಸ್ತ್ರೋಕ್ತವಾಗಿ ಮದುವೆ ನೆರವೇರಿದೆ.
ಅವಳಿ ಸಹೋದರಿಯರಾದ ಪಿಂಕಿ ಮತ್ತು ರಿಂಕಿ ಮುಂಬೈನಲ್ಲಿ ಟೆಕ್ಕಿಗಳಾಗಿದ್ದಾರೆ. ಚಿಕ್ಕಂದಿನಿಂದಲೂ ಒಂದೇ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದ ಕಾರಣ, ಒಬ್ಬರನ್ನೊಬ್ಬರು ಬಿಟ್ಟು ದೂರ ಇರಲಾಗದೇ, ಇಬ್ಬರು ಸಹೋದರಿಯರು ಅತುಲ್ ಅವರನ್ನು ಮದುವೆಯಾಗಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.
ಅತುಲ್ ಮೊದಲಿನಿಂದಲೂ ಅವಳಿ ಸಹೋದರಿಯರ ಕುಟುಂಬಕ್ಕೆ ಪರಿಚಿತನಾಗಿದ್ದ. ಕೆಲ ದಿನಗಳ ಹಿಂದೆ ತಂದೆ ನಿಧನರಾದ ಹಿನ್ನೆಲೆಯಲ್ಲಿ ಸಹೋದರಿಯರು ತಾಯಿಯೊಂದಿಗೆ ವಾಸವಾಗಿದ್ದರು. ಯಾವಾಗ ತಾಯಿಗೂ ಅನಾರೋಗ್ಯ ಕಾಡಲು ಆರಂಭಿಸಿತೋ ಆಗ ಅತುಲ್ ಕಾರಿನಲ್ಲಿ ತಾಯಿಯನ್ನು ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ಮಾಡಿಸಿಕೊಂಡು ಬರುತ್ತಿದ್ದರು. ಈ ವೇಳೆ ಅತುಲ್ ಅವಳಿ ಸಹೋದರಿಯರ ಜೊತೆ ತುಂಬಾ ಸಲುಗೆ ಬೆಳೆಸಿಕೊಂಡಿದ್ದ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದು, ಹೀಗಾಗಿ ಅತುಲ್ನನ್ನು ಮದುವೆಯಾಗಲು ಅವಳಿ ಸಹೋದರಿಯರು ನಿರ್ಧರಿಸಿದ್ದಾರೆ.

