ಕಲಬುರಗಿ : ತನ್ನ ಇಬ್ಬರು ಮುದ್ದಾದ ಮಕ್ಕಳನ್ನ ಬಾವಿಗೆ ತಳ್ಳಿ ನಂತರ ತಾನೂ ಅದೇ ಬಾವಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಆಳಂದ ಪಟ್ಟಣದಲ್ಲಿ ನಡೆದಿದೆ. ಆಳಂದ ಪಟ್ಟಣದ ನೇಕಾರ ಕಾಲೋನಿ ನಿವಾಸಿ ಸಿದ್ದಾರೂಡ ಮಹಾಮಲ್ಲಪ್ಪ ಅಕ್ಕ (35), ಅವರ ಪುತ್ರಿ ಶ್ರೇಯಾ (10) ಹಾಗೂ ಮಗ ಮನೀಶ್ (11) ಮೃತಪಟ್ಟವರು.
ಒಂದೆಡೆ ಹೆಚ್ಚಾದ ಸಾಲ, ಇನ್ನೊಂದೆಡೆ ಸುಧಾರಿಸದ ಪತ್ನಿ ಆರೋಗ್ಯದಿಂದ ನೊಂದು ಸಿದ್ದಾರೂಡ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
ಅನಾರೋಗ್ಯ… ಸಾಲ…

ಸಿದ್ದಾರೂಡ ಹಾಗೂ ಅವರ ಪತ್ನಿ ಸಂಗೀತಾ ಕಿರಾಣಿ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ಓರ್ವ ಪುತ್ರ ಹಾಗೂ ಪುತ್ರಿ ಇಬ್ಬರು ಮುದ್ದಾದ ಮಕ್ಕಳಿದ್ದರು. ಆದರೆ ಪತ್ನಿಗೆ ಅನಾರೋಗ್ಯಕ್ಕೀಡಾಗಿದ್ದರು. ಸಾಲ ಸೂಲ ಮಾಡಿ ಆಸ್ಪತ್ರೆಗೆ ತೋರಿಸಿದರು ಆರೋಗ್ಯ ಸುಧಾರಿಸಿರಲಿಲ್ಲ. ಸಾಲ ಬೆಳೆಯಿತು ಹೊರತಾಗಿ ಆರೋಗ್ಯದಲ್ಲಿ ಚೇತರಿಕೆ ಕಾಣಲಿಲ್ಲ ಎನ್ನಲಾಗಿದೆ.
ಶಾಲೆ ಬರುತ್ತಿದ್ದಂತೆ ಇಹಲೋಕ ತ್ಯಜಿಸಿದ ಮಕ್ಕಳು :
ಸಿದ್ದಾರೂಡ ಹಾಗೂ ಸಂಗೀತಾ ದಂಪತಿಯ ಮಕ್ಕಳು ಪಟ್ಟಣದ ಹತ್ಯಾನ ಬಡಾವಣೆಯಲ್ಲಿರುವ ನೇತಾಜಿ ಪ್ರಾಥಮಿಕ ಶಾಲೆಯಲ್ಲಿ ಮನೀಶ್ 5 ನೇ ತರಗತಿ ಹಾಗೂ ಶ್ರೇಯಾ 4 ನೇ ತರಗತಿಯಲ್ಲಿ ಓದುತ್ತಿದ್ದರು.
ಎಂದಿನಂತೆ ಗುರುವಾರ ಬೆಳಗ್ಗೆ ಮಕ್ಕಳನ್ನು ಶಾಲೆಗೆ ಬಿಟ್ಟು ಬಂದಿದ್ದ ಸಿದ್ದಾರೂಡ, ಸಾಯಂಕಾಲ ಮಕ್ಕಳನ್ನು ಕರೆದುಕೊಂಡು ಬರಲು ಬೈಕ್ ತಗೊಂಡು ಹೋಗಿದ್ದರು. ಆದರೆ ಮಕ್ಕಳನ್ನ ಕರೆದುಕೊಂಡು ಬರುವಾಗ ಮಾರ್ಗ ಮಧ್ಯೆ ಆಳಂದ ಪಟ್ಟಣದ ಪ್ರವಾಸಿ ಮಂದಿರ ಹಾಗೂ ಬಸ್ ಘಟಕ ಮಧ್ಯೆ ಇರುವ ಬಾವಿ ಬಳಿ ಬೈಕ್ ನಿಲ್ಲಿಸಿ ಮಕ್ಕಳ ಸಮೇತ ಬಾವಿಗೆ ಹಾರಿದ್ದಾರೆ ಎಂದು ತಿಳಿದುಬಂದಿದೆ.

ಶುಕ್ರವಾರ ಬೆಳಗ್ಗೆ ಬಾವಿಯಲ್ಲಿ ಬಾಲಕನ ಶವ ತೇಲಿ ಬಂದಿದೆ. ಅಲ್ಲದೆ ಬಾವಿ ಪಕ್ಕದಲ್ಲಿಯೇ ಬೈಕ್, ಮೊಬೈಲ್, ಪಾದರಕ್ಷೆ ಇರುವದನ್ನು ಗಮನಿಸಿದ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಹಾಗೂ ಅಗ್ನಿ ಶಾಮಕ ಸಿಬ್ಬಂದಿಯನ್ನು ಕರೆಸಿ ಬಾಲಕನ ಶವವನ್ನು ಹೊರತೆಗೆದಿದ್ದಾರೆ. ನಂತರ ಶೋಧಕಾರ್ಯ ಮುಂದುವರೆಸಿ ಬಾಲಕಿ ಶ್ರೇಯಾಳ ಶವವನ್ನು ಕೂಡಾ ಹೊರ ತೆಗೆದಿದ್ದಾರೆ. ಆದರೆ ಬೆಳಗ್ಗೆಯಿಂದ ಇಳಿಹೊತ್ತಿನವರೆಗೂ ಶೋಧ ಕಾರ್ಯ ನಡೆಸಿದರೂ ಸಿದ್ದಾರೂಢ ಅವರ ಶವ ಒತ್ತೆಯಾಗಿರಲಿಲ್ಲ. ಹೀಗಾಗಿ ಎರಡು ಮೋಟಾರ್ ಬಳಸಿ ಬಾವಿಯಲ್ಲಿನ ನೀರು ಖಾಲಿ ಮಾಡಿದಾಗ ಸಂಜೆ 5 ಗಂಟೆ ಸುಮಾರಿಗೆ ಸಿದ್ದಾರೂಢ ಶವ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಮೃತನ ಪತ್ನಿ ಸಂಗೀತಾ ನೀಡಿದ ದೂರಿನ ಅನ್ವಯ ಆಳಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

