ಮಂಗಳೂರು : ಮಧ್ಯಪ್ರದೇಶದ ಭೋಪಾಲ್ನಲ್ಲಿ ಸಶಸ್ತ್ರ ಸೀಮ್ ಬಲ್ ಕರ್ತವ್ಯದಲ್ಲಿದ್ದ ಯೋಧ ಹೃದಯಾಘಾತದಿಂದ ನಿನ್ನೆ ನಿಧನ ಹೊಂದಿದ್ದಾರೆ ಎಂಬ ಘಟನೆ ಬೆಳಕಿಗೆ ಬಂದಿದೆ.
ಮುರಳಿಧರ್ ರೈ(37) ಮೃತಪಟ್ಟ ಯೋಧ. ಮಂಗಳೂರು ಮೂಲದ ಯೋಧ ಮಲಗಿದ್ದದಲ್ಲೇ ನಿನ್ನೆ ಹೃದಯಾಘಾತಗೊಂಡು ನಿಧನರಾಗಿದ್ದಾರೆ.
ರವಿವಾರ ರಾತ್ರಿ ವೀಡಿಯೋ ಕಾಲ್ ಮೂಲಕ ಪತ್ನಿ ಜತೆ ಮಾತನಾಡಿದ್ದರು. ಫೆ. 5ರಂದು ನಡೆಯಲಿದ್ದ ತಾಯಿಯ ನಿಧನದ ಮೊದಲ ವರ್ಷದ ಕಾರ್ಯಕ್ರಮಕ್ಕಾಗಿ ಎರಡು ವಾರದ ರಜೆಯಲ್ಲಿ ಮಂಗಳವಾರ ಹೊರಟು ಬುಧವಾರ ಊರಿಗೆ ಬರುವವರಿದ್ದರು. ಅವರು ಪತ್ನಿ ಹಾಗೂ ಏಳು ತಿಂಗಳ ಮಗುವನ್ನು ಅಗಲಿದ್ದಾರೆ.

2007ರಲ್ಲಿ ಕಾನ್ಸ್ಟೇಬಲ್ ಆಗಿ ಸಶಸ್ತ್ರ ಸೀಮ್ ಬಲ್ ಕರ್ತವ್ಯಕ್ಕೆ ಸೇರ್ಪಡೆಯಾಗಿದ್ದ ಮುರಳಿಧರ್ ರೈ, ಹವಾಲ್ದಾರ್ ಆಗಿ ಭೋಪಾಲ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಇಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಅವರ ಪಾರ್ಥೀವ ಶರೀರ ಆಗಮಿಸಲಿದ್ದು, ಜಿಲ್ಲಾಡಳಿತದಿಂದ ಸಕಲ ಸರ್ಕಾರಿ ಗೌರವ ಸಲ್ಲಿಸಲಾಗುವುದು.
ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ ಸೇರಿದಂತೆ ಅನೇಕ ಅಧಿಕಾರಿಗಳು ಸಕಲ ಸರ್ಕಾರಿ ಗೌರವ ಸಲ್ಲಿಸಲಿದ್ದಾರೆ. ಬಳಿಕ ಎ.ಜೆ ಆಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗುತ್ತದೆ. ನಾಳೆ ಶಕ್ತಿನಗರದ ಯೋಧನ ಮನೆಯಲ್ಲಿ ಅಂತಿಮ ವಿಧಿವಿಧಾನ ನಡೆಯಲಿದೆ.

