ವಡೋದರ: ಗುಜರಾತ್ನ ಪಂಚಮಹಲ್ ಜಿಲ್ಲೆಯ ದೆಲ್ವೋಲ್ ಗ್ರಾಮದಲ್ಲಿ ಗೋದ್ರಾ ಘಟನೆಯ ಬಳಿಕ ನಡೆದ ಹಿಂಸಾಚಾರದಲ್ಲಿ 17 ಮಂದಿ ಅಲ್ಪಸಂಖ್ಯಾತರನ್ನು ಹತ್ಯೆ ಮಾಡಿದ ಆರೋಪ ಎದುರಿಸುತ್ತಿದ್ದ 22 ಆರೋಪಿಗಳನ್ನು ಹಲೋಲ್ ಹೆಚ್ಚುವರಿ ಸತ್ರ ನ್ಯಾಯಾಲಯ ಮಂಗಳವಾರ ಬಿಡುಗಡೆ ಮಾಡಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಹರ್ಷ ತ್ರಿವೇದಿ ಈ ಕುರಿತು ಆದೇಶ ಹೊರಡಿಸಿದ್ದಾರೆ. ಈ ಪೈಕಿ ಎಂಟು ಮಂದಿ ವಿಚಾರಣೆಯ ಅವಧಿಯಲ್ಲಿ ಮೃತಪಟ್ಟಿದ್ದರು.
2002ರ ಗೋಧ್ರಾ ಹತ್ಯಾಕಾಂಡದ ನಂತರ ನಡೆದ ಕೋಮುಗಲಭೆಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯದ 17 ಮಂದಿ ಕೊಲೆ ಮಾಡಲಾಗಿತ್ತು. ಬಳಿಕ ಸಾಕ್ಷ್ಯವನ್ನು ನಾಶಪಡಿಸಲು ದೇಹಗಳನ್ನು ಸುಡಲಾಗಿತ್ತು.

ಪ್ರಕರಣದಲ್ಲಿ ವಿಚಾರಣೆ ನಡೆಸಿರುವ ಗುಜರಾತ್ನ ಪಂಚಮಹಲ್ ಜಿಲ್ಲೆಯ ಹಲೋಲ್ ಪಟ್ಟಣದ ನ್ಯಾಯಾಲಯವು, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ 22 ಆರೋಪಿಗಳನ್ನು ದೋಷ ಮುಕ್ತಗೊಳಿಸಿದೆ.
18 ವರ್ಷಗಳಿಂದ ವಿಚಾರಣಾಧೀನ ಕೈದಿಗಳಾಗಿದ್ದ 8 ಮಂದಿ ವಿಚಾರಣೆ ವೇಳೆ ಮೃತಪಟ್ಟಿದ್ದರು.
2002ರಲ್ಲಿ 59 ಮಂದಿಯ ಸಾವಿಗೆ ಕಾರಣವಾದ ಸಾಬರಮತಿ ಎಕ್ಸ್ಪ್ರೆಸ್ ರೈಲಿಗೆ ಕಿಡಿಗೇಡಿಗಳು ಬೆಂಕಿ ಇಟ್ಟ ಘಟನೆ ಬಳಿಕ ಭಾರಿ ಪ್ರಮಾಣದ ಕೋಮುಗಲಭೆಗಳು ಸಂಭವಿಸಿದ್ದವು.
ಘಟನೆಯ ಮರುದಿನ ಅಂದರೆ ಮಾರ್ಚ್ 1ರಂದು ಗೋದ್ರಾದಿಂದ 30 ಕಿಲೋಮೀಟರ್ ದೂರದ ಕಲೋಲ್ ಪಟ್ಟಣದ ದೆಲ್ವೋನಲ್ಲಿ ಹಲವು ಮನೆಗಳಿಗೆ ಬೆಂಕಿ ಹಚ್ಚಲಾಗಿತ್ತು. ಇದರಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ 17 ಮಂದಿ ಜೀವಂತ ದಹನವಾಗಿದ್ದರು.

2003ರ ಡಿಸೆಂಬರ್ನಲ್ಲಿ ಅಂದರೆ ಘಟನೆ ನಡೆದ 20 ತಿಂಗಳ ಬಳಿಕ ಮರು ವಿಚಾರಣೆಗೆ ಆದೇಶಿಸಲಾಗಿತ್ತು. ತಲೆ ಮರೆಸಿಕೊಂಡಿದ್ದ ಎಲ್ಲ ಆರೋಪಿಗಳನ್ನು 2004ರಲ್ಲಿ ಬಂಧಿಸಲಾಗಿದ್ದು, ಅವರ ಜಾಮೀನು ಅರ್ಜಿಗಳನ್ನು ಸ್ಥಳೀಯ ನ್ಯಾಯಾಲಯ ತಿರಸ್ಕರಿಸಿತ್ತು.