ಬೆಂಗಳೂರು : ದೇಶದೆಲ್ಲೆಡೆ ಇಂದು ಗಣರಾಜ್ಯೋತ್ಸವ ಸಂಭ್ರಮ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಆಚರಿಸಲಾಯಿತು. ಕಂದಾಯ ಇಲಾಖೆಯಿಂದ ಮೈದಾನದಲ್ಲಿ ಬೆಳಗ್ಗೆ 8 ಗಂಟೆಗೆ ಸರಿಯಾಗಿ ಧ್ವಜಾರೋಹಣ ನೆರವೇರಿತು.
ಧ್ವಜಾರೋಹಣವನ್ನು ಬೆಂಗಳೂರು ಉತ್ತರ ಅಸಿಸ್ಟೆಂಟ್ ಕಮಿಷನರ್ ಡಾ.ಶಿವಣ್ಣ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಕೇಂದ್ರ ಸಂಸದ ಪಿ.ಸಿ.ಮೋಹನ್, ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಉಪಸ್ಥಿತರಿದ್ದರು.

100ಕ್ಕೂ ಅಧಿಕ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಬ್ಯಾಂಡ್ ಸೆಟ್, ಕಂಸಾಳೆ ಸೇರಿದಂತೆ ಹಲವು ವಿಶೇಷತೆಗಳು ಗಮನ ಸೆಳೆದವು.
ಸಂತ ತೆರೇಸ ಬಾಲಕಿಯರ ಶಾಲೆ, ಚಾಮರಾಜಪೇಟೆ ಬಾಲಕಿಯರ ಶಾಲೆ, ಸರ್ಕಾರಿ ಕನ್ನಡ ಮತ್ತು ಆಂಗ್ಲ ಪ್ರಾಥಮಿಕ ಶಾಲೆ ಸೇರಿದಂತೆ 5 ಶಾಲೆಗಳಿಂದ ಮಕ್ಕಳು ಗಣರಾಜ್ಯೋತ್ಸವದಲ್ಲಿ ಭಾಗಿಯಾಗಿದ್ದರು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಎಚ್ಚರವಹಿಸಿದ್ದರು. ಸಿಸಿಟಿವಿ ಅಳವಡಿಸಿ ಮಾನಿಟರಿಂಗ್ ಕೊಠಡಿ ಸಜ್ಜುಗೊಳಿಸಲಾಗಿತ್ತು. ಬಿಗಿ ಪೊಲೀಸ್ ಭದ್ರತೆಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.
ಮೈದಾನದ ಸುತ್ತ ಮುತ್ತಲಿನ ಬೃಹತ್ ಕಟ್ಟಡ ಮೇಲೆ ವಾಚರ್ ಗಳ ನೇಮಕ ಮಾಡಲಾಗಿದ್ದು, 4 ಎಸಿಪಿ, 10 ಇನ್ಸ್ಪೆಕ್ಟರ್, 40 ಸಬ್ ಇನ್ಸ್ಪೆಕ್ಟರ್,300 ಕ್ಕೂ ಹೆಚ್ಚು ಸಿಬ್ಬಂದಿ ಹಾಗೂ 6 ಕೆಎಸ್ ಆರ್ ತುಕಡಿಗಳನ್ನ ಭಧ್ರತೆಗೆ ನಿಯೋಜನೆ ಮಾಡಲಾಗಿದೆ

