ಭೋಪಾಲ್ : ಕಳೆದ ವರ್ಷ ನಮೀಬಿಯಾದಿಂದ ತಂದ 8 ಚೀತಾ ಪೈಕಿ ಒಂದು ಚಿರತೆ ಅಸ್ವಸ್ಥಗೊಂಡಿದೆ ಎಂದು ತಿಳಿದುಬಂದಿದೆ.
ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿರುವ ಸಶಾ ಹೆಸರಿನ ಚೀತಾ ಮೂತ್ರಪಿಂಡದ ಸೋಂಕಿನಿಂದ ಬಳಲುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸೋಮವಾರದಂದು ದೈನಂದಿನ ಮೇಲ್ವಿಚಾರಣೆಯ ಸಮಯದಲ್ಲಿ ಹೆಣ್ಣು ಚೀತಾ ಆಯಾಸಗೊಂಡ ಸ್ಥಿತಿಯಲ್ಲಿತ್ತು. ಕೂಡಲೇ ಟ್ರಾನ್ಸ್‌ಕ್ವಿಲೈಸ್ ಮಾಡಿ ಕ್ವಾರಂಟೈನ್ ಆವರಣಕ್ಕೆ ಬಿಡಲಾಗಿದೆ. ಆರೋಗ್ಯ ತಪಾಸಣೆಯಲ್ಲಿ ಕಿಡ್ನಿ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವ ವಿಚಾರ ತಿಳಿದು ಬಂದಿದೆ.

ಸಶಾ ಮೇಲೆ ಈಗ ನಿಗಾ ಇಡಲಾಗಿದ್ದು ಉಳಿದ ಚೀತಾಗಳು ಚೆನ್ನಾಗಿವೆ. ಭೋಪಾಲ್‌ನ ವಾನ್ ವಿಹಾರ್‌ನಿಂದ ಡಾ ಅತುಲ್ ಗುಪ್ತಾ ನೇತೃತ್ವದ ವೈದ್ಯರ ತಂಡ ಆಗಮಿಸಿದೆ. ಚಿಕಿತ್ಸೆಗಾಗಿ ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದ ವನ್ಯಜೀವಿ ತಜ್ಞರನ್ನೂ ಸಂಪರ್ಕಿಸಲಾಗಿದೆ ಎಂದು ಕುನೋ ರಾಷ್ಟ್ರೀಯ ಉದ್ಯಾನವನದ ವಿಭಾಗೀಯ ಅರಣ್ಯಾಧಿಕಾರಿ ಪ್ರಕಾಶ್ ಕುಮಾರ್ ವರ್ಮಾ ತಿಳಿಸಿದ್ದಾರೆ.
ಅಳಿವಿನಂಚಿನಲ್ಲಿರುವ ವನ್ಯಜೀವಿಗಳನ್ನು ಸಂರಕ್ಷಣೆ ಮಾಡುವ ಯೋಜನೆಯಡಿ ನಮೀಬಿಯಾದಿಂದ ಭಾರತಕ್ಕೆ 2 ರಿಂದ 6 ವರ್ಷ ವಯಸ್ಸಿನ 3 ಗಂಡು ಹಾಗೂ 5 ಹೆಣ್ಣು ಚೀತಾಗಳನ್ನು ವಿಶೇಷ ವಿಮಾನದಲ್ಲಿ ತರಲಾಗಿತ್ತು. ತಮ್ಮ ಜನ್ಮದಿನವಾದ ಸೆ.17 ರಂದು ಪ್ರಧಾನಿ ಮೋದಿ ಚಿರತೆಗಳು ಉದ್ಯಾನವನಕ್ಕೆ ಬಿಡುಗಡೆ ಮಾಡಿದ್ದರು. ನವೆಂಬರ್‌ನಲ್ಲಿ ದೊಡ್ಡ ಆವರಣಕ್ಕೆ ಸ್ಥಳಾಂತರಿಸಿದ ಬಳಿಕ ಕಾಡಿಗೆ ಬಿಡುಗಡೆ ಮಾಡಲಾಗಿತ್ತು.

