ವಡೋದರಾ: ಟೀಂ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಅಕ್ಷರ್ ಪಟೇಲ್ ತಮ್ಮ ಪ್ರೇಯಸಿ ಮೇಹಾ ಪಟೇಲ್ ಅವರೊಂದಿಗೆ ಹಸೆಮಣೆ ಏರಿದ್ದಾರೆ. ಇಬ್ಬರ ನಿಶ್ಚಿತಾರ್ಥ ಕಳೆದ ವರ್ಷ ಅಕ್ಷರ್ ಪಟೇಲ್ ಅವರ ಜನ್ಮದಿನದಿಂದೇ ನಡೆದಿತ್ತು. ಇದೀಗ ಗುಜರಾತ್‌ನ ವಡೋದರಾದಲ್ಲಿ ವಿವಾಹೋತ್ಸವ ನಡೆದಿದೆ. ಸದ್ಯ ವಿವಾಹದ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಅಕ್ಷರ್ ಮತ್ತು ಮೇಹಾ ಅವರ ಮದುವೆ ಡ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಮೇಹಾ ಪಟೇಲ್ ಅವರೇ ತಮ್ಮ ಟ್ವಿಟರ್‌ನಲ್ಲಿ ಮದುವೆಯ ಹಲವು ಫೋಟೋ, ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.
ಕಳೆದ 2022ರ ಜನವರಿಯಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅಕ್ಷರ್ ಪಟೇಲ್ ಪತ್ನಿ ಓರ್ವ ಡಯಟೇಷಿಯನ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿಯೂ ಸಾಕಷ್ಟು ಸಕ್ರಿಯರಾಗಿದ್ದಾರೆ.
ಅಕ್ಷರ್ ಪಟೇಲ್‌ಗಾಗಿ ಮೇಹಾ ತನ್ನ ಒಂದು ಕೈಯಲ್ಲಿ ಅಕ್ಷ್ ಎಂಬ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ.

ನ್ಯೂಜಿಲೆಂಡ್ ಸರಣಿಯಿಂದ ಅಕ್ಷರ್‌ಗೆ ವಿರಾಮ: ಅಕ್ಷರ್ ಪಟೇಲ್ ಈ ವರ್ಷದ ಆರಂಭದಲ್ಲಿ ಶ್ರೀಲಂಕಾ ವಿರುದ್ಧ ಟಿ20 ಮತ್ತು ಏಕದಿನ ಕ್ರಿಕೆಟ್ ಸರಣಿಗಳನ್ನು ಆಡಿದ್ದರು. ಇದರಲ್ಲಿ ಅವರ ಪ್ರದರ್ಶನ ಅತ್ಯುತ್ತಮವಾಗಿತ್ತು. ಭಾರತ ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಗೆದ್ದುಕೊಂಡಿದೆ. ಇಂದಿನಿಂದ ಉಭಯ ತಂಡಗಳ ನಡುವೆ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಅಕ್ಷರ್ ತಮ್ಮ ಮದುವೆಗಾಗಿ ಈ ಎರಡೂ ಸರಣಿಗಳಿಂದ ಹೊರಗುಳಿದಿದ್ದಾರೆ.
