ಖ್ಯಾತ ಕವಿ, ವಿಮರ್ಶಕ ಕೆವಿ ತಿರುಮಲೇಶ್ ನಿಧನರಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು. ಇಂದು ಮುಂಜಾನೆ ಹೈದರಾಬಾದಿನ ತಮ್ಮ ಮಗಳ ನಿವಾಸದಲ್ಲಿ ಅವರು ಇಂದು ಕೊನೆಯುಸಿರು ಎಳೆದಿದ್ದಾರೆ.
ಅವರು ಅಲ್ಪಕಾಲದ ಅಸೌಖ್ಯದಿಂದ ಅವರು ಬಳಲುತ್ತಿದ್ದರು. ಹೃದಯ ಕಾಯಿಲೆ ಹೊಂದಿದ್ದ ಅವರಿಗೆ ಇತ್ತೀಚೆಗೆ ಹೃದಯದ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಕಳೆದ ವಾರದವರೆಗೂ ಆಸ್ಪತ್ರೆಯಲ್ಲಿದ್ದ ಅವರು ನಿನ್ನೆ ಡಿಸ್‌ಚಾರ್ಜ್ ಆಗಿ ಮನೆಗೆ ಬಂದಿದ್ದರು. ಅವರು ಪತ್ನಿ, ಮೂವರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ.
ಕೇರಳದ ಕಾಸರಗೋಡು ಜಿಲ್ಲೆಯ ಕಾರಡ್ಕ ಎಂಬ ಗ್ರಾಮದಲ್ಲಿ 1940ರ ಸೆಪ್ಟೆಂಬರ್ 12ರಂದು ಕೆ.ವಿ. ತಿರುಮಲೇಶ್ ಜನಿಸಿದರು. ಕನ್ನಡ ಭಾಷಾ ಅವರ ಕೊಡುಗೆ ಅಪಾರವಾಗಿದ್ದು, ಕವಿ, ಕತೆಗಾರ, ಭಾಷಾ ವಿಜ್ಞಾನಿ, ವಿದ್ವಾಂಸ ಹಾಗೂ ವಿಮರ್ಶಕನಾಗಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

ಹೈದರಾಬಾದಿನ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲೀಷ್ ಆಂಡ್ ಫಾರಿನ್ ಲಾಂಗ್ವೇಜಸ್ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತಿ ಹೊಂದಿದ್ದರು.
ಪ್ರಮುಖ ಕೃತಿಗಳು :
ಅಕ್ಷಯ ಕಾವ್ಯ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ತಿರುಮಲೇಶ್ ಅವರು ‘ವಠಾರ’ ಸಂಕಲನದ ಮೂಲಕ ಕಾವ್ಯ ಕ್ಷೇತ್ರ ಪ್ರವೇಶಿಸಿದರು.
‘ಮುಖವಾಡಗಳು’, ‘ವಠಾರ’, ‘ಮಹಾಪ್ರಸ್ಥಾನ’, ಮುಖಾಮುಖಿ’, ‘ಅವಧ’, ‘ಪಾಪಿಯೂ’ ಕವನ ಸಂಕಲನಗಳು.

ನಾಯಕ ಮತ್ತು ಇತರರು, ಜಾಗುವ ಮತ್ತು ಇತರರು, ಕೆಲವು ಕಥಾನಕಗಳು, ಕಳ್ಳಿಗಿಡದ ಹೂ ಕಥಾಸಂಕಲನಗಳು.
ಆರೋಪ, ಅನೇಕ, ತರಂಗಾಂತರ ಕಾದಂಬರಿಗಳು. ವ್ಯಕ್ತಿ ಮತ್ತು ಪರಂಪರೆಗಳು, ಸಮ್ಮುಖ, ನಮ್ಮ ಕನ್ನಡ, ಅಸ್ತಿತ್ವವಾದ, ವಿಮರ್ಶಾ ಬರಹಗಳು.
ತಿರುಮಲೇಶ್ ಅವರ ‘ಅಕ್ಷಯ ಕಾವ್ಯ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಮಕ್ಕಳ ಸಾಹಿತ್ಯ ರಚನೆ ಮಾಡಿರುವ ತಿರುಮಲೇಶ್ ಅವರು ಎಜ್ರಾ ಪೌಂಡ್, ಚೀನಿ ಕವಿತೆಗಳನ್ನು ಅನುವಾದಿಸಿದ್ದಾರೆ. ತಿರುಮಲೇಶ್ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಸಂದಿದೆ.
ಕೆವಿ ತಿರುಮಲೇಶ್ ಅವರು ಆರು ಕಥಾ ಸಂಕಲನಗಳು, ನಾಲ್ಕು ಕಿರು ಕಾದಂಬರಿಗಳು, ಎರಡು ನಾಟಕಗಳು, ಭಾವಗೀತೆ ಹಾಗೂ ಮಕ್ಕಳ ಕವಿತೆಗಳ ತಲಾ ಒಂದು ಸಂಕಲನಗಳು ಪ್ರಕಟವಾಗಿವೆ.

