ಮಂಡ್ಯ : ಮೈಸೂರು ಬೆಂಗಳೂರು ಹೆದ್ದಾರಿಯಲ್ಲಿರುವ ರೋಟರಿ ಕಾಲೇಜು ಮುಂಭಾಗದ ನಡುರಸ್ತೆಯಲ್ಲಿ ಕಾಲೇಜು ಹುಡುಗಿಗೆ ಹುಡುಗನೊಬ್ಬ ತಾಳಿಕಟ್ಟಿದ ಘಟನೆ ನಡೆದಿದೆ.
ಮಂಡ್ಯ ಜಿಲ್ಲೆಯಲ್ಲಿ ಯಾವುದೆ ಭಯವಿಲ್ಲದೇ ನಡು ರಸ್ತೆಯಲ್ಲೇ ಕಾಲೇಜು ಹುಡುಗಿಗೆ ತಾಳಿ ಕಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಆದರೆ, ಈ ವೀಡಿಯೋ 2 ವರ್ಷಗಳ ಬಳಿಕ ವೈರಲ್ ಆಗಿದೆ.
ಹೌದು, ಮಂಡ್ಯದ ಯುವಕ ತನ್ನ ಪ್ರೇಯಸಿ ಕಾಲೇಜು ಹುಡುಗಿದೆ ರಸ್ತೆಯಲ್ಲಿ ತಾಳಿ ಕಟ್ಟುವ ವೀಡಿಯೋ ಎರಡು ವರ್ಷಗಳ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಎರಡು ವರ್ಷಗಳ ಹಿಂದೆ ಈ ಘಟನೆ ನಡೆದಿದ್ದು, ಇನ್ನು ಮುಂದಿನ ವಾರದಲ್ಲಿ ಪ್ರೇಮಿಗಳ ದಿನಾಚರಣೆ ಇರುವ ಹಿನ್ನೆಲೆಯಲ್ಲಿ ಈಗ ವೀಡಿಯೋ ವೈರಲ್ ಆಗುತ್ತಿದೆ. ಯುವಕ ತಾಳಿ ಕಟ್ಟುವ ವೇಳೆ ಆತನ ಸ್ನೇಹಿತರೇ ವಿಡಿಯೋ ಚಿತ್ರೀಕರಿಸಿದ್ದು, ಎರಡು ವರ್ಷಗಳ ಬಳಿಕ ವಿಡಿಯೋ ಹರಿಬಿಟ್ಟಿರುವ ಶಂಕೆ ವ್ಯಕ್ತವಾಗುತ್ತಿದೆ.

ಕಾಲೇಜಿಗೆ ಹೋಗಿ ಬರುತ್ತಿದ್ದ ಹುಡುಗಿಗೆ ತಾಳಿ ಕಟ್ಟಿದ ಘಟನೆ ಬಳಿಕ ಯುವತಿಯ ಮನೆ ಕಡೆಯವರು ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಠಾಣೆಯಲ್ಲಿ ದೂರು ದಾಖಲಾಗಿ ಎಫ್‌ಐಆರ್ ಆದರೂ ಕೂಡ ಇಬ್ಬರ ಪೋಷಕರು ಪರಸ್ಪರ ಒಪ್ಪಿಕೊಂಡ ಪ್ರಕರಣವನ್ನು ಇತ್ಯರ್ಥ ಮಾಡಿಕೊಂಡಿದ್ದರು. ನಂತರ ಇಬ್ಬರಿಗೂ ಶಾಸ್ತ್ರೋಕ್ತವಾಗಿ ಮದುವೆಯನ್ನೂ ಮಾಡಿದ್ದರು. ಸದ್ಯ ಜೋಡಿ ಗ್ರಾಮದಲ್ಲೇ ಅನ್ಯೋನ್ಯತೆಯಿಂದ ಸಂಸಾರ ಸಾಗಿಸುತ್ತಿದೆ. ಆದರೆ ಕಿಡಿಗೇಡಿಗಳು ಎರಡು ವರ್ಷಗಳ ಹಿಂದಿನ ವಿಡಿಯೋವನ್ನ ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.