ನವದೆಹಲಿ: ಬ್ರಿಟಿಷ್ ಫಾರ್ಮಾಸ್ಯುಟಿಕಲ್ ದೈತ್ಯ ಕಂಪನಿ, ಅಸ್ಟ್ರಾಜೆನೆಕಾ, ಕೋವಿಡ್ -19 ವಿರುದ್ಧ ತಾನು ತಯಾರಿಸಿದ್ದ ಎರಡು ಲಸಿಕೆಯಲ್ಲಿ ಬ್ಲಡ್ ಕ್ಲಾಟ್ ಅಂದರೆ ರಕ್ತ ಹೆಪ್ಪುಗಟ್ಟುವಿಕೆಗೆ ಸಂಬಂಧಿಸಿದ ಅಪರೂಪದ ಸೈಡ್ ಎಫೆಕ್ಟ್ ಆದ ಟಿಟಿಎಸ್ ಉಂಟು ಮಾಡಲಿದೆ ಎಂದು ಒಪ್ಪಿಕೊಂಡಿದೆ. ಕೋರ್ಟ್‌ನ ಎದುರು ಆಸ್ಟ್ರಾಜೆನಿಕಾ ಇದನ್ನು ಒಪ್ಪಿಕೊಂಡ ಬೆನ್ನಲ್ಲಿಯೇ ಭಾರತದಲ್ಲೂ ಆತಂಕ ಶುರುವಾಗಿದೆ. ಟಿಟಿಎಸ್ ಅಥವಾ ಥ್ರಂಬೋಸಿಸ್ ಜೊತೆಗೆ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣವಾಗುತ್ತದೆ ಮತ್ತು ರಕ್ತದಲ್ಲಿ ಕಡಿಮೆ ಪೇಟ್ಲೆಟ್ಸ್‌ಗೂ ಕಾರಣವಾಗುತ್ತದೆ.
ಈ ಸುದ್ದಿಯು ಭಾರತದ ಜನರನ್ನು ಒಳಗೊಂಡಂತೆ ವಿಶ್ವದಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರಿದೆ. ಭಾರತದಲ್ಲಿ ಆಸ್ಟ್ರಾಜೆನಿಕಾ ಕಂಪನಿಯು ಕೋವಿಶೀಲ್ಡ್ ಬ್ರ್ಯಾಂಡ್ ಹೆಸರಿನಲ್ಲಿ ಕೋವಿಡ್-19 ಲಸಿಕೆಯನ್ನು ಮಾರಾಟ ಮಾಡಿತ್ತು.
ಅಡ್ಡಪರಿಣಾಮದ ಸುದ್ದಿ ಹೊರಬಿದ್ದ ಕೂಡಲೇ ಭಾರತ ಸರ್ಕಾರವನ್ನು ದೂಷಣೆ ಮಾಡುವ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಆಸ್ಟ್ರಾಜೆನಿಕಾ ಸಂಸ್ಥೆಯ ಭಾರತೀಯ ಆವೃತ್ತಿಯಾದ ಕೋವಿಶೀಲ್ಡ್ ಲಸಿಕೆಯನ್ನು ದೇಶದಲ್ಲಿ ಜನರಿಗೆ ನೀಡಲು ಸರ್ಕಾರ ಅನುಮತಿಸಿದ್ದು ಏಕೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸುತ್ತಿದ್ದಾರೆ. ಈ ಲಸಿಕೆಯಿಂದ ಬಹುತೇಕ ಭಾರತೀಯರು ಟಿಎಸ್‌ಎಸ್ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ದಿ ಹೆಲ್ತಿ ಇಂಡಿಯನ್ ಪ್ರಾಜೆಕ್ಟ್ ತಂಡ ಫ್ಯಾಕ್ಟ್ ಚೆಕ್ ನಡೆಸಿದ್ದು, ಈ ವಾದಗಳು ಅರ್ಧ ಸತ್ಯ ಎಂದು ಸಾಬೀತಾಗಿವೆ. ಕೋವಿಶೀಲ್ಡ್ ಲಸಿಕೆಯಿಂದ ಟಿಎಸ್‌ಎಸ್ ಅಡ್ಡ ಪರಿಣಾಮ ಇದೆ ಅನ್ನೋದು ಸತ್ಯವಾದರೂ ಅದು ಅತ್ಯಂತ ವಿರಳ ಅಡ್ಡ ಪರಿಣಾಮವಾಗಿದೆ.
ಏನಿದು ಟಿಎಸ್‌ಎಸ್? ಇದರ ಲಕ್ಷಣಗಳೇನು?
ಥ್ರೋಂಬೋಸಿಸ್ ವಿತ್ ಥ್ರೋಂಬೋಸೈಟೋಪೇನಿಯಾ ಸಿಂಡ್ರೋಮ್ (ಟಿಎಸ್‌ಎಸ್) ಇದು ಅತ್ಯಂತ ಗಂಭೀರ ಆರೋಗ್ಯ ಪರಿಸ್ಥಿತಿ. ದೇಹದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಹಾಗೂ ರಕ್ತ ಕಣಗಳ ಕೊರತೆ ಉಂಟಾಗುವಂತೆ ಮಾಡುತ್ತದೆ. ಕೋವಿಡ್ 19 ಲಸಿಕೆಗೂ ಈ ಸಿಂಡ್ರೋಮ್‌ಗೂ ನೇರ ಸಂಪರ್ಕವಿದೆ.
ಈ ಸಿಂಡ್ರೋಮ್ ಕಾಣಿಸಿಕೊಂಡರೆ ಹಲವು ರೀತಿಯ ಲಕ್ಷಣಗಳು ಕಂಡು ಬರುತ್ತವೆ. ಉಸಿರಾಟ ತಗ್ಗಿವಿಕೆ, ಎದೆ ನೋವು, ಕಾಲು ಊದಿಕೊಳ್ಳುವುದು, ನಿರಂತರ ತಲೆ ನೋವು ಹಾಗೂ ಹೊಟ್ಟೆ ನೋವು ಕಾಣಿಸಿಕೊಳ್ಳಬಹುದು.
ಟಿಎಸ್‌ಎಸ್ ಅಡ್ಡ ಪರಿಣಾಮ ಕೇವಲ ಕೋವಿಶೀಲ್ಡ್ ಲಸಿಕೆಯಿಂದ ಮಾತ್ರ ಬರುತ್ತಾ?
ಇಲ್ಲವೇ ಇಲ್ಲ. ಟಿಎಸ್‌ಎಸ್ ಅಡ್ಡ ಪರಿಣಾಮ ಇನ್ನಿತರ ಕೋವಿಡ್ ಲಸಿಕೆಗಳಿಂದಲೂ ಸೃಷ್ಟಿಯಾಗುತ್ತದೆ. ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆಯ ಕೋವಿಡ್ ಲಸಿಕೆಗೆ ಜನ್‌ಸೆನ್ ಎಂದು ಹೆಸರಿಟ್ಟಿದ್ದು, ಈ ಲಸಿಕೆಯಿಂದಲೂ ಟಿಎಸ್‌ಎಸ್ ಉಂಟಾಗಬಹುದು. 2023ರಲ್ಲಿಯೇ ಈ ಸಂಬಂಧ ಮಾಹಿತಿ ನೀಡಿದ್ದ ವಿಶ್ವ ಆರೋಗ್ಯ ಸಂಸ್ಥೆ, ಅಡೆನೋವೈರಸ್ ವೆಕ್ಟರ್ ಮೂಲದ ಲಸಿಕೆಗಳಿಂದ ಟಿಎಸ್‌ಎಸ್ ಅಡ್ಡ ಪರಿಣಾಮ ಉಂಟಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು.
2023ರಲ್ಲಿ ಯೇಲ್ ಮೆಡಿಸಿನ್ ಸಂಸ್ಥೆ ಈ ಕುರಿತಾಗಿ ವರದಿ ನೀಡಿತ್ತು. ಈ ಸಂಸ್ಥೆಯ ಹೆಮಟೋಲಜಿಸ್ಟ್‌ಗಳಾದ ರಾಬರ್ಟ್ ಬೋನಾ, ಎಂಡಿ ಅವರು ಈ ಕುರಿತಾಗಿ ವಿವರಿಸಿದ್ದರು. ‘ರಕ್ತ ಹೆಪ್ಪುಗಟ್ಟುವಿಕೆಯು ಸಾಮಾನ್ಯವಾಗಿ ಹಾಸಿಗೆ ಹಿಡಿದಿರುವ ರೋಗಿಗಳಿಗೆ, ಆಸ್ಪತ್ರೆಯಲ್ಲಿರುವವರಿಗೆ ಹಾಗೂ ಉರಿಯೂತ, ಸೋಂಕು ಅಥವಾ ಕ್ಯಾನ್ಸರ್ ರೀತಿಯ ಇನ್ನಿತರ ಆರೋಗ್ಯ ಸಮಸ್ಯೆ ಇರುವವರಿಗೆ ಟಿಎಸ್‌ಎಸ್ ಕಾಣಿಸಿಕೊಳ್ಳುತ್ತದೆ. ಹೀಗಾಗಿ, ಇದು ಸಂಪೂರ್ಣವಾಗಿ ಹೊಸ ಸಮಸ್ಯೆ ಏನೂ ಅಲ್ಲ’ ಎಂದು ಹೇಳಿದ್ದರು.
ಕೋವಿಶೀಲ್ಡ್ ಲಸಿಕೆ ಪಡೆದ ಭಾರತೀಯರಿಗೆ ಟಿಎಸ್‌ಎಸ್ ಭೀತಿ ಇದೆಯೇ?
ಸ್ವಲ್ಪ.. ಆದರೆ, ಭಯ ಪಡಬೇಕಾದ ಅಗತ್ಯ ಇಲ್ಲವೇ ಇಲ್ಲ.
ಕೋವಿಶೀಲ್ಡ್ ಲಸಿಕೆಯನ್ನು ದೇಶಾದ್ಯಂತ ನೀಡಲಾಗಿದೆ. ಆದರೆ, ಕಳೆದ ಕೆಲವು ವರ್ಷಗಳಲ್ಲಿ ಅತ್ಯಂತ ವಿರಳ ಸಂಖ್ಯೆಯ ಜನರಲ್ಲಿ ಟಿಎಸ್‌ಎಸ್ ಕಾಣಿಸಿಕೊಂಡಿದೆ. ಒಂದು ವೇಳೆ ಲಸಿಕೆ ಪಡೆದ ಜನರ ಪೈಕಿ ಭಾರೀ ಪ್ರಮಾಣದಲ್ಲಿ ಟಿಎಸ್‌ಎಸ್‌ನಿಂದ ಸಾವು ಸಂಭವಿಸಿದ್ದರೆ ಸಹಜವಾಗಿಯೇ ಮಾಧ್ಯಮಗಳಲ್ಲಿ ವರದಿಯಾಗುತ್ತಿತ್ತು.
ಮತ್ತೊಂದು ಗಮನಾರ್ಹ ವಿಚಾರ ಎಂದರೆ, ಥ್ರೋಂಬೋಸಿಸ್ ವಿತ್ ಥ್ರೋಂಬೋಸೈಟೋಪೇನಿಯಾ ಸಿಂಡ್ರೋಮ್ (ಟಿಎಸ್‌ಎಸ್) ಹಾಗೂ ಲಸಿಕೆ ಪ್ರಚೋದಿಸಿದ ಇಮ್ಯೂನ್ ಥ್ರೋಂಬೋಟಿಕ್ ಥ್ರೋಂಬೋಸೈಟೋಪೇನಿಯಾ (VIIT) ಲಕ್ಷಣಗಳು ಅತ್ಯಂತ ವಿರಳ ಅಡ್ಡ ಪರಿಣಾಮಗಳಾಗಿದ್ದು, ಲಸಿಕೆ ನೀಡಿದ ಕೆಲ ಹೊತ್ತಿನಲ್ಲೇ ಕಾಣಿಸಿಕೊಳ್ಳುತ್ತವೆ. ಆದರೆ, ಭಾರತದಲ್ಲಿ ವ್ಯಾಪಕವಾಗಿ ಕೋವಿಶೀಲ್ಡ್ ಲಸಿಕೆ ನೀಡಲಾಗಿದೆ. ದೇಶದ ಎಲ್ಲಿಯೂ ಲಸಿಕೆ ನೀಡಿದ ಬಳಿಕ ಈ ರೀತಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಉದಾಹರಣೆಗಳಿಲ್ಲ.
ಕೋವಿಡ್ – 19 ಸಾಂಕ್ರಾಮಿಕದ ಹಾವಳಿ ನಿಯಂತ್ರಿಸುವ ನಿಟ್ಟಿನಲ್ಲಿ ಲಸಿಕೆಯು ಅತ್ಯಂತ ಸುರಕ್ಷಿತ ಹಾಗೂ ಪರಿಣಾಮಕಾರಿ ಪಾತ್ರ ವಹಿಸಿದೆ. ಆದಾಗ್ಯೂ ಅತ್ಯಂತ ವಿರಳವಾಗಿ ಟಿಎಸ್‌ಎಸ್ ಹಾಗೂ ವಿಐಟಿಟಿ ರೀತಿಯ ಅಡ್ಡ ಪರಿಣಾಮಗಳು ಉಂಟಾಗಿವೆ. ಈ ರೀತಿಯ ಅಡ್ಡ ಪರಿಣಾಮಗಳ ಲಕ್ಷಣಗಳು ಗೋಚರಿಸಿದ ಕೂಡಲೇ ಚಿಕಿತ್ಸೆ ಪಡೆದರೆ ರೋಗಿಗಳ ಆರೋಗ್ಯ ಸುಧಾರಿಸಲಿದೆ. ಜೊತೆಯಲ್ಲೇ ಲಸಿಕೆಗಳ ಸುರಕ್ಷತೆ ಕುರಿತಾಗಿ ಪ್ರಾಧಿಕಾರಗಳು ಸೂಕ್ಷ್ಮವಾಗಿ ಗಮನ ಹರಿಸಿವೆ.
ಇನ್ನು ಕೋವಿಡ್ ಲಸಿಕೆಯಿಂದ ಹಾಗೂ ಥ್ರೋಂಬೋಸಿಸ್ ವಿತ್ ಥ್ರೋಂಬೋಸೈಟೋಪೇನಿಯಾ ಸಿಂಡ್ರೋಮ್ (ಟಿಎಸ್‌ಎಸ್)ನಿಂದ ಎಲ್ಲ ಭಾರತೀಯರಿಗೂ ಜೀವ ಹಾನಿ ಆಗಬಹುದು ಎಂಬ ಸಂದೇಶಗಳಿಗೆ ಯಾವುದೇ ಅರ್ಥವಿಲ್ಲ. ಜೊತೆಯಲ್ಲೇ ಇದು ಸರ್ಕಾರದ ವೈಫಲ್ಯ ಎಂದು ಜನರ ದಾರಿತಪ್ಪಿಸುವ ಹಾಗೂ ಪ್ರಚೋದಿಸುವ ಕೆಲಸ ಮಾಡಲಾಗುತ್ತಿದೆ.
ಎಲ್ಲಾ ಲಸಿಕೆಗಳಲ್ಲೂ ಅಡ್ಡ ಪರಿಣಾಮ ಸಾಮಾನ್ಯವೇ?
ಹೌದು. ಬಹುತೇಕ ಎಲ್ಲ ಲಸಿಕೆಗಳಲ್ಲೂ ಅತ್ಯಂತ ಸೌಮ್ಯ ಸ್ವರೂಪದ ಅಡ್ಡ ಪರಿಣಾಮಗಳು ಆಗಬಹುದು. ಆದರೆ, ಈ ಅಡ್ಡ ಪರಿಣಾಮಗಳಿಂದ ಬರುವ ಜ್ವರ, ನೋವುಗಳು ತಾತ್ಕಾಲಿಕ. ಲಸಿಕೆಯಿಂದ ಆಗುವ ಪ್ರಯೋಜನಕ್ಕೆ ಹೋಲಿಕೆ ಮಾಡಿದರೆ ಲಸಿಕೆಯಿಂದ ಆಗುವ ಅಡ್ಡ ಪರಿಣಾಮಗಳು ಅತಿ ಕಡಿಮೆ ಎನ್ನಬಹುದು.
ನೀವು ಕೋವಿಶೀಲ್ಡ್ ಲಸಿಕೆ ಪಡೆದಿದ್ದರೆ ಭಯಪಡಬೇಕೇ?
ಇಲ್ಲ. ನೀವು ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವೇ ಇಲ್ಲ.
ಭಾರತೀಯ ರಾಷ್ಟ್ರೀಯ ವೈದ್ಯಕೀಯ ಸಂಘಟನೆ ಸಹ ಅಧ್ಯಕ್ಷರಾದ ಡಾ. ಜಯದೇವನ್ ಅವರು ಕೇರಳ ರಾಜ್ಯದ ಕೋವಿಡ್ ಕಾರ್ಯಪಡೆಯಲ್ಲಿ ಕಾರ್ಯ ನಿರ್ವಹಿಸಿದ್ದು, ಅವರ ಪ್ರಕಾರ ಕೆಲವು ಲಸಿಕೆಗಳು ಅತಿ ವಿರಳ ಸಮಸ್ಯೆಗಳಿಗೆ ಕಾರಣ ಆಗಬಹುದು ಎಂದಿದ್ದಾರೆ. ಟಿಎಸ್‌ಎಸ್ ಕೂಡಾ ಅತಿ ವಿರಳ ಎಂದಿದ್ದಾರೆ. ಅದೂ ಕೂಡಾ ಲಸಿಕೆ ಪಡೆದ ಕೆಲವೇ ವಾರಗಳಲ್ಲಿ ಕಾಣಿಸಿಕೊಳ್ಳುತ್ತದೆ ಎಂದೂ ಹೇಳಿದ್ದಾರೆ. ಹೀಗಾಗಿ, ನೀವು ಮುನ್ನೆಚ್ಚರಿಕೆ ವಹಿಸಬೇಕಿದೆ. ಯಾವುದೇ ರೀತಿಯ ಟಿಎಸ್‌ಎಸ್ ರೋಗ ಲಕ್ಷಣಗಳು ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸಬೇಕಿದೆ.
ಈ ವರದಿಯನ್ನು ಸಿದ್ದಪಡಿಸಿರುವ ದಿ ಹೆಲ್ತಿ ಇಂಡಿಯನ್ ಪ್ರಾಜೆಕ್ಟ್ (THIP) ವಿಶ್ವ ಆರೋಗ್ಯ ಸಂಸ್ಥೆಯ ಲಸಿಕಾ ಸುರಕ್ಷತಾ ಜಾಲದ ಸದಸ್ಯ ಸಂಸ್ಥೆಯಾಗಿದೆ. ಈ ಸಂಸ್ಥೆಯು ಲಸಿಕೆ ಕುರಿತಾಗಿ ನೀಡುವ ವರದಿಯು ಅತ್ಯಂತ ನಿಖರವಾಗಿದೆ. ಈ ಲಸಿಕೆ ಕುರಿತಾಗಿ ಸುದ್ದಿ ಸತ್ಯಾಂಶವನ್ನು ಸಂಸ್ಥೆ ಈಗಾಗಲೇ ಪರಿಶೀಲಿಸಿದೆ. ಹಲವು ಲಸಿಕೆಗಳ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಮಾಹಿತಿಗಳಿಗೆ ಸ್ಪಷ್ಟನೆ ನೀಡಿದೆ. ಲಸಿಕೆಯು ವಿಷಕಾರಿ, ಮಿದುಳಿಗೆ ಹಾನಿಕರ ಸೇರಿದಂತೆ ಹಲವು ರೀತಿಯ ಸುಳ್ಳು ವಾದಗಳಿಗೆ ಸ್ಪಷ್ಟನೆ ನೀಡಿದೆ. ಈ ಲಸಿಕೆಯು ಹಾನಿಕರವಲ್ಲ ಆದರೆ ಹಾನಿಯಿಂದ ರಕ್ಷಣೆ ಒದಗಿಸುತ್ತದೆ.