ಮಂಡ್ಯ : ರಸ್ತೆ ಬದಿ ನಿಂತಿದ್ದ ಕಾರಿಗೆ ಮತ್ತೊಂದು ಕಾರು ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಮೂವರು ಯುವಕರು ಗಾಯಗೊಂಡಿರುವ ಘಟನೆ ಮದ್ದೂರು ಪಟ್ಟಣದ ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಫ್ಲೈ ಓವರ್ ಮೇಲೆ ಇಂದು ಮಧ್ಯಾಹ್ನ ನಡೆದಿದೆ.
ಬೆಂಗಳೂರಿನ ಜಿಗಣಿ ಕಾರ್ಖಾನೆಯೊಂದರ ನೌಕರರಾದ ಜಾಬ್ ಬಹದ್ದೂರ್ (25), ಪುನೀತ್ (22), ಕುಂಜಾನ್ (24) ಗಾಯಗೊಂಡವರು.
ಅಪಘಾತದಲ್ಲಿ ತಲೆಗೆ ತೀವ್ರವಾಗಿ ಪೆಟ್ಟುಬಿದ್ದಿದ್ದ ಜಾಬ್ ಬಹದ್ದೂರ್ ಸೇರಿದಂತೆ ಮೂವರನ್ನು ಮದ್ದೂರು ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ.

ಅಪಘಾತದಲ್ಲಿ ಮಹಿಳೆ ಸೇರಿದಂತೆ ನಾಲ್ವರು ಕಾರಿನಿಂದ ಇಳಿದು ರಸ್ತೆ ಬದಿ ನಿಂತಿದ್ದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಂಡ್ಯದ ಗುತ್ತಲು ನಿವಾಸಿಗಳಾದ ನಾಲ್ವರು ಪಟ್ಟಣದ ರೇಷ್ಮೆ ಇಲಾಖೆಯ ಹೆದ್ದಾರಿ ಮೇಲು ಸೇತುವೆ ಮೇಲೆ ನಿಂತು ಹೆದ್ದಾರಿ ವೀಕ್ಷಣೆ ಮಾಡುತ್ತಿದ್ದರು. ಈ ವೇಳೆ ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾರೊಂದು ವೇಗವಾಗಿ ಬಂದು ಮುಂದೆ ನಿಂತಿದ್ದ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಡಿಕ್ಕಿ ಹೊಡೆದ ಕಾರಿನ ಏರ್ ಬ್ಯಾಗ್ ತೆರೆದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸದೇ ಕೇವಲ ಗಾಯಗೊಂಡಿದ್ದಾರೆ.
ರಾಷ್ಟೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಇತರೆ ವಾಹನಗಳ ಪ್ರಯಾಣಿಕರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದಾರೆ. ಈ ಬಗ್ಗೆ ಮದ್ದೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

