ಬೆಂಗಳೂರು : 2022-23ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮದ ಎಲ್ಲಾ ಶಾಲೆಗಳಲ್ಲಿನ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸಲಾಗುತ್ತಿರುವ ಮೌಲ್ಯಾಂಕನಕ್ಕೆ ಸಂಬಂಧಿಸಿದಂತೆ ಆಯಾ ಶಾಲೆಗಳನ್ನೇ ಪರೀಕ್ಷಾ ಕೇಂದ್ರಗಳನ್ನಾಗಿ ಪರಿಗಣಿಸಿ, ಇಲಾಖೆ ಆದೇಶ ಹೊರಡಿಸಿದೆ.
ಈ ಸಂಬಂಧ ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು ಆದೇಶ ಹೊರಡಿಸಿದ್ದು, 2022-23ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ 5ನೇ ತರಗತಿ ವಿದ್ಯಾರ್ಥಿಗಳಿಗೆ ದಿನಾಂಕ 15-03-2023 ರಿಂದ 18-03-2023ರವರೆಗೆ ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ದಿನಾಂಕ 13-03-2023 ರಿಂದ 18-03-2023ರವರೆಗೆ ಮೌಲ್ಯಾಂಕನವನ್ನು ನಡೆಸಲಾಗುತ್ತಿದೆ. ಪರೀಕ್ಷೆಗೆ ಶಾಲಾವಾರ ವಿದ್ಯಾರ್ಥಿಗಳ ಸಂಖ್ಯೆಯನ್ನಾಧರಿಸಿ ಪರೀಕ್ಷಾ ಕೇಂದ್ರಗಳನ್ನು ರಚಿಸುವಂತೆ ತಿಳಿಲಾಗಿತ್ತು ಎಂದಿದೆ.
ದಿನಾಂಕ 03-03-2023ರಿಂದ ಸಹಾಯವಾಣಿಯನ್ನು ಪ್ರಾರಂಭಿಸಲಾಗಿದ್ದು, ವಿದ್ಯಾರ್ಥಿಗಳು ಪ್ರಸ್ತುತ ಶಾಲೆಯಿಂದ Tag ಮಾಡಲಾದ ಪರೀಕ್ಷಾ ಕೇಂದ್ರಗಳಿಗೆ ಹೋಗಲು ಅನಾನುಕೂಲವಾಗುತ್ತಿರುವ ಬಗ್ಗೆ ಹಲವು ಪೋಷಕರು ದೂರವಾಣಿ ಮೂಲಕ ತಿಳಿಸಿರುತ್ತಾರೆ. ಈ ಹಿನ್ನಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಆಯಾ ಶಾಲೆಗಳನ್ನೇ ಪರೀಕ್ಷಾ ಕೇಂದ್ರಗಳಾಗಿ ಪರಿಗಣಿಸಿ, ಈಗಾಗಲೇ ನಿಗದಿಪಡಿಸಿರುವ ದಿನಾಂಕಗಳಂದೇ ಮೌಲ್ಯಾಂಕನವನ್ನು ನಡೆಸುವುದು ಎಂದು ಆದೇಶದಲ್ಲಿ ಹೇಳಲಾಗಿದೆ.


