ಲೇಖನ: ರಾಜೇಶ್ ಭಟ್ ಪಣಿಯಾಡಿ
ರಂಗಭೂಮಿ ಕ್ಷೇತ್ರದಲ್ಲಿ ಉಡುಪಿಯ ಮಟ್ಟಿಗೆ ಅತಿ ಹೆಚ್ಚು
ಶ್ರೇಷ್ಟ ನಟ ಪ್ರಶಸ್ತಿ ಗಿಟ್ಟಿಸಿಕೊಂಡವರಿದ್ದರೆ ಆ ಗೌರವ ಮುರೂರು ಶ್ರೀನಿವಾಸ ಭಟ್ಟರಿಗೆ ಸಲ್ಲುತ್ತದೆ. ಯಾರಪ್ಪಾ ಈ ಹೊಸ ಜನ ಅಂತ ತಿಳ್ಕೊಂಡ್ರಾ… ಅದು ದಾರಾಶಿಕೋ ನಾಟಕದ ಔರಂಗಜೇಬ್, ಬೀಷ್ಮನ ಕೊನೆಯ ದಿನಗಳು ನಾಟಕದ ಬೀಷ್ಮ ಅಲ್ಲಾ.. ಮುದ್ರಾರಾಕ್ಷಸದ ಚಾಣಕ್ಯ… ಹೌದು ಈ ಎಲ್ಲ ಪಾತ್ರಗಳಿಗೆ ಬೆಲೆ ತಂದು ಕೊಟ್ಟ ನಮ್ಮೂರಿನ ಹೆಮ್ಮೆಯ ಚಿರಪರಿಚಿತ ನಟ ಎಮ್. ಎಸ್. ಭಟ್.
ಒಳ್ಳೆಯ ಶರೀರ ಹಾಗೂ ಶಾರೀರ ಇವರಿಗೆ ದೇವರು ಕೊಟ್ಟ ವರ. ಜೊತೆಗೆ ಅವರೊಳಗೆ ಕುಳಿತೊಬ್ಬ ಅದ್ಬುತ ಕಲಾವಿದ. ಮೂರು ಗುಣಗಳು ಕಲೆತರೆ ಸಾಕು ಮೂಡಿ ಬರುವ ಆ ಪಾತ್ರ ಎಲ್ಲರೂ ಇಷ್ಟ ಪಡುವ ಸತ್ಪಾತ್ರವೇ ಸರಿ. ಎಂ.ಎಸ್. ಸ್ಪರ್ಧಾ ನಾಟಕದಲ್ಲಿ ಭಾಗವಹಿಸಿದರೆ ಯಾವುದಾದರೊಂದು ಶ್ರೇಷ್ಠ ನಟ ಪ್ರಶಸ್ತಿ ಅವರಿಗೆ ಕಟ್ಟಿಟ್ಟ ಬುತ್ತಿ.
ಈ ವ್ಯಕ್ತಿ ಕಲಾಲೋಕದ ಒಂದು ಶಕ್ತಿ. ಹುಲ್ಲಾಗು ಬೆಟ್ಟದಡಿ ಎಂಬ ಮಂಕುತಿಮ್ಮನ ಕಗ್ಗದ ಸಾಲುಗಳಂತೆ ಯಾವುದೇ ಅಹಂ ಇಲ್ಲದೆ, ಶ್ರೇಷ್ಟ ಕಲಾವಿದನೆಂಬ ಗರ್ವವಿಲ್ಲದೆ ಉತ್ತಮ ನಡೆ ನುಡಿಯೊಂದಿಗೆ ಎಲ್ಲರೊಳಗೆ ಬೆರೆಯುವ ಪರಿ ನಿಜಕ್ಕೂ ಶ್ಲಾಘನೀಯ. ಕಿರಿಯ ಹೊಸ ನಿರ್ದೇಶಕರ ನಾಟಕಗಳಲ್ಲೂ ಪಾತ್ರ ಒಪ್ಪಿಕೊಳ್ಳುವ ಹೊಸ ತನ್ನು ಕಲಿಯುವ ಪರಿ, ಪಾತ್ರದ ಮೇಲಿನ ಅಭಿಮಾನ ಮೆಚ್ಚುವಂಥದ್ದು.
ದಿ. ಕೆ ನರಹರಿ ಹಾಗೂ ಶಾರದಾ ಭಟ್ ದಂಪತಿಗಳ ಮುದ್ದಿನ ಕುವರ ಶ್ರೀನಿವಾಸರವರ ಹುಟ್ಟೂರು ಕಲಾವಿದರ ಊರೆಂದೇ ಹೆಸರಾದ ಕೊಡವೂರು. ಹುಟ್ಟೂರಿನ ನಂತರ ತಂದೆಯ ಊರು ಹಿರ್ಗಾನ , ಕಾರ್ಕಳದಲ್ಲಿ ಓದು ಮುಂದುವರಿಸಿ ಪಿಯುಸಿ ಮುಗಿಸಿ ಕೊಕ್ಕರ್ಣೆಯಲ್ಲಿ ಶಿಕ್ಷಕರ ತರಬೇತಿ ಪೂರೈಸಿದರು ಎಂ.ಎಸ್. 1976 ರಲ್ಲಿ ತನ್ನ 23ರ ಹರೆಯದಲ್ಲಿ ಜೀವನೋಪಾಯಕ್ಕಾಗಿ ಅಧ್ಯಾಪನ ವೃತ್ತಿಯನ್ನು ಕೈಗೆತ್ತಿಕೊಂಡು 36 ವರ್ಷದ ಸುದೀರ್ಘ ಸೇವೆ ಸಲ್ಲಿಸಿ ವೃತ್ತಿಯಿಂದ ನಿವೃತ್ತಿ ಪಡೆದರು.


ಬಾಲ್ಯದಲ್ಲಿ ನಾಟಕಾಭಿನಯ ಹಾಗೂ ಯಕ್ಷಗಾನದ ಬಗ್ಗೆ ಆಕಾಶದಷ್ಟು ಆಸೆ ಇದ್ದರೂ ಅವಕಾಶ ಒದಗಿ ಬಂದಿರಲಿಲ್ಲ. ಬಣ್ಣದ ವೇಷದ ಚಂದವನ್ನು ನೋಡಲು ಕಾಲ್ನಡಿಗೆಯಲ್ಲೇ ಊರೂರು ಸುತ್ತಿ ರಂಗದ ಚೌಕಿಗೆ ಹೋಗಿ ಹೊಳೆಯುವ ಕಿರೀಟ ಮುಟ್ಟಿ ಖುಷಿ ಪಟ್ಟದ್ದಿದೆ. ಅಂದಿನ ಆ ಹುಚ್ಚು ಆ ಬದ್ದತೆ ಇಂದು ಈ ಕಲಾವಿದನ ಕೀರ್ತಿಯನ್ನು ಆಗಸದೆತ್ತರಕ್ಕೆ ಏರಿಸಿದ್ದಂತೂ ನಿಜ.
ಅಂದು ಓದು ಮುಗಿಸಿ ವೃತ್ತಿ ನಿಮಿತ್ತ ಕೊಡವೂರಿಗೆ ಬಂದು ಹುಡುಕಾಟದಲ್ಲಿದ್ದಾಗ ಶಾಲಾ ವಿದ್ಯಾರ್ಥಿ ಸಂಘದ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾಗ ಶ್ರೀ ಶಂಕರ ನಾರಾಯಣ ನಾಟಕ ಮಂಡಳಿಯ ನಂಟು ಅಂಟಿತು. ಅಲ್ಲಿ ಮೊದಲ ಬಾರಿ “ದಾರಿಯಾವುದಯ್ಯಾ ಮುಂದಕೆ ” ಎಂಬ ನಾಟಕದ ಮುಖ್ಯ ಪಾತ್ರಕ್ಕೆ ಹಚ್ಚಿದ ಬಣ್ಣ ಜೀವನದ ಆಶಯಗಳಿಗೆ ನಾಂದಿ ಹಾಡಿ, ಬಣ್ಣದ ಬದುಕಿನ ರಂಗಪಯಣಕ್ಕೆ ಹೋಳಿ ಹಬ್ಬದ ಸಂಭ್ರಮವನ್ನು ಒದಗಿಸಿತ್ತು. 1982ರಲ್ಲಿ ಉಡುಪಿಯ ಹಿರಿಯ ರಂಗಭೂಮಿ ಸಂಸ್ಥೆ ಎಂ.ಎಸ್. ರನ್ನು ಕೈ ಬೀಸಿ ಕರೆಯಿತು. ನಟನೆಯ ಹುಮ್ಮಸ್ಸಿಗೊಂದು ಸುಂದರ ವೇದಿಕೆ ಸಿಕ್ಕಂತಾಯ್ತು. ವೆಂಕಟಾಚಲ ಭಟ್, ರಾಮದಾಸ್, ಆನಂದ ಗಾಣಿಗ, ಬಾಸುಮ ರಂತಹ ಶ್ರೇಷ್ಟ ರಂಗ ನಿರ್ದೇಶಕರ ಅನುಭವದ ಮಹಾಪೂರದ ರಸ ಸಿಂಚನದಿಂದ ಕಲಾವಿದನಿಗೆ ರಂಗ ಭೂಮಿ ಅನುಭವ ಮಂಟಪವಾಯ್ತು. ಹಲವಾರು ನಾಟಕಗಳಲ್ಲಿ ಮುಖ್ಯ ಪಾತ್ರ ನಿರ್ವಹಿಸುವ ಭಾಗ್ಯ ದೊರಕಿ ಜನಮಾನಸದಲ್ಲಿ ಶ್ರೇಷ್ಟ ಕಲಾವಿದನೆಂಬ ಪಟ್ಟ ದೊರಕುವಂತಾಯ್ತು. ಅದೇ ರೀತಿ ನಾಟಕರಂಗ ಪಯಣದಲ್ಲಿ ಹಲವಾರು ಇತರ ಸಾಂಸ್ಕೃತಿಕ ಸಂಸ್ಥೆಗಳು ಮುಖ್ಯವಾಗಿ ಸುಮನಸಾ ಕೊಡವೂರು, ಉದ್ಯಾವರ ಫ್ರೆಂಡ್ಸ್, ಅಮೋಘ , ಹೀಗೆ ಹಲವು ಸಂಸ್ಥೆಗಳು ಭಟ್ಟರ ಒಳ ಕಲಾವಿದನಿಗೆ ವೇದಿಕೆ ಕಲ್ಪಿಸಿಕೊಟ್ಟವು. ಹಾಗಾಗಿ ಕನ್ನಡ ಹಾಗೂ ಸ್ಥಳೀಯ ತುಳು ಭಾಷೆಯಲ್ಲಿ ಲೆಕ್ಕವಿಲ್ಲದಷ್ಟು ನಾಟಕಗಳಲ್ಲಿ ಅಭಿನಯಿಸಿ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ 25 ಬಾರಿ ರಾಷ್ಟ್ರಮಟ್ಟದಲ್ಲಿ ಎರಡು ಬಾರಿ ಶ್ರೇಷ್ಟ ನಟ ಪ್ರಶಸ್ತಿ ಪಡೆದು ಪ್ರಶಸ್ತಿಗಳ ಸರದಾರ ಎನಿಸಿಕೊಂಡರು. ಇನ್ನು ರಂಗ ಭೂಮಿಯ ಸಂಜೀವಿನಿ ಮತ್ತು ಗುವೆಲ್ ಕಳವಾತ್ಂಡ್ ನಾಟಕದ ಮೂಲಕ ವಿದೇಶದಲ್ಲಿ ಉತ್ತಮ ಅಭಿನಯ ನೀಡಿ ಬೆಹರಿನ್ ಕನ್ನಡ ಸಂಘದ ವತಿಯಿಂದ ಸನ್ಮಾನ ಗಿಟ್ಟಿಸಿಕೊಂಡರು.
ಅದೇ ರೀತಿ ಅಂದು ನಾಟಕವನ್ನು ಒಪ್ಪಿಕೊಂಡ ಸಮಯದಲ್ಲಿ ಇನ್ನೊಂದೆಡೆ ಶ್ರೇಷ್ಟ ರಂಗ ನಿರ್ದೇಶಕ ಕಲಾವಿದ ಉದ್ಯಾವರ ಮಾಧವ ಆಚಾರ್ಯರ ಸಮೂಹವೆಂಬ ಸಂಸ್ಥೆ ಯಕ್ಷಗಾನದ ಹೆಜ್ಜೆ ಹಾಕಲು ಕಲಿಸಿತ್ತು. ಜೊತೆಗೆ ಗುರು ಸಂಜೀವ ಸುವರ್ಣರ ಮಾರ್ಗದರ್ಶನವೂ ದೊರೆತು ಶೃತಿ ಎಂಬ ಸಂಸ್ಥೆ ಸ್ಥಾಪಿಸಲು ಧೈರ್ಯ ನೀಡಿತ್ತು. ರಂಗಸ್ಥಳದಲ್ಲಿ ಜೀವನದಲ್ಲಿ ಪ್ರಥಮ ಬಾರಿಗೆ ದೊಡ್ಡ ಮುಂಡಾಸಿನ ಶಲ್ಯ ಪಾತ್ರದ ಮೂಲಕ ಒಡ್ಡೋಲಗ ಅಂದು ಕೊಟ್ಟಿದ್ದಾಯ್ತು.. ಅಂದಿನಿಂದ ಇಂದಿನ ವರೆಗಿನ ಯಕ್ಷ ನಡೆ ಅತಿ ಸುಂದರ ಪ್ರಯಾಣವಾಯ್ತು. ಎಂ.ಎಸ್.ಭಟ್ರು ಬಣ್ಣ ಹಾಕಿ ರಾಜಗಾಂಭೀರ್ಯದಿಂದ ವೇದಿಕೆ ಹತ್ತಿದರೆ ಸಾಕು.. ಜನ, ವೇದಿಕೆ ತತ್ತರ. ಕಂಸ, ದುಷ್ಟ ಬುದ್ಧಿ, ಭಸ್ಮಾಸುರ, ರಾವಣ, ದ್ರೋಣ ಪಾತ್ರಗಳು ಇವರ ಮಾತು, ಕುಣಿತ, ವೇಷದಿಂದ ಬಡಗು ತಿಟ್ಟು ಯಕ್ಷಗಾನ ಪ್ರೇಮಿಗಳೆಲ್ಲರ ಮನಸೂರೆಗೊಳ್ಳುತ್ತಿತ್ತು.
ಈ ಮಧ್ಯೆ ಹಲವು ಚಲನಚಿತ್ರ ಹಾಗೂ ಟಿ.ವಿ. ಧಾರವಾಹಿಗಳಲ್ಲೂ ಅವಕಾಶ ಒದಗಿ ಬಂತು…ಎಂ.ಎಸ್. ರಿಗೆ ಕೋಟಿ ಚೆನ್ನಯ ಟಿವಿ . ಧಾರವಾಹಿಯ ಸಾಯನ ಬೈದ್ಯ ಪಾತ್ರ ಒಳ್ಳೆಯ ಹೆಸರು ತಂದಿತು. ಭುವನ ಜ್ಯೋತಿ, ಕಂಚಿಲ್ದ ಬಾಲೆ , ಮಹಾನದಿ, ಮಲ್ಲದಾನ, ವೆನಿಲಾ, ಯಶೋದೆ, ಸರಸಮ್ಮನ ಸಮಾಧಿ, ಬಯಲಾಟ್ ಟೆಲಿಫಿಲ್ಮ್ ಹೀಗೆ ಸಿಕ್ಕ ಅವಕಾಶಗಳಿಂದ ಬೆಳ್ಳಿ ಪರದೆಯಲ್ಲೂ ಜನ ಸಾಗರಕ್ಕೆ ಒಂದಷ್ಟು ಹತ್ತಿರವಾದರು.
ಇನ್ನು ನಟನೆಯ ಜೊತೆಗೆ “ಲೋಕಗು ಲೋಕ ಇಜ್ಜಿ ” “ಎಲ್ಲರೂ ನನ್ನ ಮಕ್ಕಳೆ ” ಎಂಬಿತ್ಯಾದಿ ನಾಟಕಗಳ ನಿರ್ದೇಶನ ಮಾಡಿ ನಿರ್ದೇಶನದಲ್ಲೂ ಸೈ ಎನಿಸಿಕೊಂಡರು.
ಪ್ರಶಸ್ತಿಗಳಿಗಂತೂ ಮನೆಯ ಒಂದು ಕೋಣೆ ಸಾಲದಾಗಿತ್ತು. ಕನ್ನಡ ಸಾಹಿತ್ಯ ಪರಿಷತ್ತಿನ ಸನ್ಮಾನ, ಕೃಷ್ಣ ಪ್ರೇಮ ಪ್ರಶಸ್ತಿ, ರಂಗ ಪ್ರಪಂಚ ರಾಷ್ಟ್ರಪ್ರಶಸ್ತಿ, 2017ರ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಹೀಗೆ ಹಲವಾರು.
ನಾವಿಬ್ಬರು ನಮಗಿಬ್ಬರು ಎಂಬಂತೆ ಸುಂದರ ತುಂಬು ಸಂಸಾರ. ಸಪ್ತಪದಿಯ ಜೊತೆ ಗಂಡನ ಪ್ರತಿಯೊಂದು ಹೆಜ್ಜೆಯ ಜೊತೆ ಹೆಜ್ಜೆ ಹಾಕಿದ ಅಕ್ಕರೆಯ ಮಡದಿ ಗಾಯತ್ರಿ, ಸಕ್ಕರೆಯ ಸವಿಯಂತಹ ಮಗ ಕೃಷ್ಣ ರಾಜ್ ಹಾಗೂ ಮಗಳು ಶ್ರೀನಿಧಿ ಸದಾ ತಂದೆಯ ಸರ್ವತೋಮುಖ ಬೆಳವಣಿಗೆಯಲ್ಲಿ ಕೈ ಜೋಡಿಸಿದವರು.
ಹೀಗೆ ನಟನಾಗಿ ನಾಟಕ ಹಾಗೂ ಯಕ್ಷಗಾನ ರಂಗದಲ್ಲಿ ಸದಾ ಮಿಂಚುತ್ತಿರುವ ಎಂ.ಎಸ್. ಭಟ್ ರವರಿಗೆ ಸಂಸ್ಕೃತಿ ವಿಶ್ವಪ್ರತಿಷ್ಠಾನ (ರಿ) ಉಡುಪಿ ಮತ್ತು ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ ಜಂಟಿಯಾಗಿ ಈ ಬಾರಿಯ ವಿಶ್ವರಂಗ ಪುರಸ್ಕಾರ – 2023 ನ್ನು ನೀಡಿ ಗೌರವಿಸುತ್ತಿದೆ.
