ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಶನಿವಾರ ಜಂಟಿಯಾಗಿ ಭಾರತ-ಬಾಂಗ್ಲಾದೇಶ ಸ್ನೇಹ ಡೀಸೆಲ್ ಪೈಪ್ಲೈನ್ ಉದ್ಘಾಟಿಸಿದ್ದಾರೆ.
ಭಾರತ ಮತ್ತು ಬಾಂಗ್ಲಾದೇಶದ ನಡುವೆ ಮೊದಲ ಗಡಿಯಾಚೆಗಿನ ಇಂಧನ ಕೊಳವೆ ಮಾರ್ಗವನ್ನು 377 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗಿದೆ. ಅದರಲ್ಲಿ ಬಾಂಗ್ಲಾದೇಶದ ಭಾಗವನ್ನು 285 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ.
‘ಕಳೆದ ಕೆಲವು ವರ್ಷಗಳಲ್ಲಿ, ಪ್ರಧಾನಿ ಶೇಖ್ ಹಸೀನಾ ಅವರ ಸಮರ್ಥ ನಾಯಕತ್ವದಲ್ಲಿ, ಬಾಂಗ್ಲಾದೇಶವು ಗಮನಾರ್ಹ ಪ್ರಗತಿಯನ್ನ ಸಾಧಿಸಿದೆ. ಪ್ರತಿಯೊಬ್ಬ ಭಾರತೀಯನೂ ಅದರ ಬಗ್ಗೆ ಹೆಮ್ಮೆಪಡುತ್ತಾನೆ ಮತ್ತು ಬಾಂಗ್ಲಾದೇಶದ ಈ ಅಭಿವೃದ್ಧಿ ಪ್ರಯಾಣಕ್ಕೆ ನಾವು ಕೊಡುಗೆ ನೀಡಲು ಸಾಧ್ಯವಾಗಿದೆ ಎಂದು ನಮಗೆ ಸಂತೋಷವಾಗಿದೆ ‘ ಎಂದು ಪಿಎಂ ಮೋದಿ ಹೇಳಿದ್ದಾರೆ.

‘ಈ ಪೈಪ್ಲೈನ್ ಬಾಂಗ್ಲಾದೇಶದ ಅಭಿವೃದ್ಧಿಯನ್ನು ಮತ್ತಷ್ಟು ವೇಗಗೊಳಿಸುತ್ತದೆ ಮತ್ತು ಎರಡೂ ದೇಶಗಳ ನಡುವಿನ ಹೆಚ್ಚುತ್ತಿರುವ ಸಂಪರ್ಕಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ ಎಂದು ನನಗೆ ವಿಶ್ವಾಸವಿದೆ’ ಎಂದು ಹೇಳಿದ ಅವರು,
‘ಇಂದು ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಂಬಂಧಗಳ ಹೊಸ ಆವೃತ್ತಿಯ ಪ್ರಾರಂಭವಾಗಿದೆ. ಭಾರತ-ಬಾಂಗ್ಲಾದೇಶ ಸ್ನೇಹ ಕೊಳವೆ ಮಾರ್ಗವನ್ನು ಸೆಪ್ಟೆಂಬರ್ 2018 ರಲ್ಲಿ ಪ್ರಾರಂಭಿಸಲಾಯಿತು. ಈ ಪೈಪ್ ಲೈನ್ ಸಹಾಯದಿಂದ ಉತ್ತರ ಪಶ್ಚಿಮ ಬಂಗಾಳದ ಜಿಲ್ಲೆಗಳಿಗೆ 1 ಮಿಲಿಯನ್ ಮೆಟ್ರಿಕ್ ಟನ್ ಹೈಸ್ಪೀಡ್ ಡೀಸೆಲ್ ನೀಡಲಾಗುವುದು. ಇದು ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ಪೂರೈಕೆಯ ಇಂಗಾಲದ ಹೆಜ್ಜೆ ಗುರುತನ್ನು ಸಹ ಕಡಿಮೆ ಮಾಡುತ್ತದೆ ‘ ಎಂದು ಪಿಎಂ ಮೋದಿ ಈ ಸಂದರ್ಭದಲ್ಲಿ ಹೇಳಿದರು.

