ಬೆಂಗಳೂರು : 2022-23ನೇ ಸಾಲಿನ 5 ಮತ್ತು 8ನೇ ತರಗತಿಯ ಮೌಲ್ಯಾಂಕನ ಪರೀಕ್ಷೆಗೆ ಶಿಕ್ಷಣ ಇಲಾಖೆ ಪರಿಷ್ಕ್ರತ ‘ಪ್ರವೇಶ ಪತ್ರ’ ಬಿಡುಗಡೆ ಮಾಡಲಾಗಿದೆ.
2022-23ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ದಿನಾಂಕ:13.03.2023 ರಿಂದ ಮೌಲ್ಯಾಂಕನವನ್ನು (ಸಂಕಲನಾತ್ಮಕ ಮೌಲ್ಯಮಾಪನ SA-2 ನಡೆಸುವಂತೆ ಉಲ್ಲೇಖ(1 ಮತ್ತು 2)ರಲ್ಲಿ ತಿಳಿಸಲಾಗಿತ್ತು.
ಸದರಿ ಮೌಲ್ಯಾಂಕನವನ್ನು ಉಲ್ಲೇಖ(3) ರಂತೆ ಮುಂದೂಡಲಾಗಿತ್ತು.ಮುಂದುವರೆದು, 5 ಮತ್ತು 8ನೇ ತರಗತಿಗಳಿಗೆ ದಿನಾಂಕ:27.03,2023 ರಿಂದ ಮೌಲ್ಯಾಂಕನವನ್ನು ನಡೆಸಲು ಕೋರ್ಟ್ ಅವಕಾಶ ಕಲ್ಪಿಸಿದ್ದು, ಈ ಸಂಬಂಧ ಪರಿಷ್ಕೃತ ಪ್ರವೇಶ ಪತ್ರದ ಮಾದರಿಯನ್ನು ದಿನಾಂಕ:18.03.2023 ರಂದು ಮಂಡಲಿಯ ವೆಬ್ಸೈಟ್ನಲ್ಲಿ (https://kseab.karnataka.gov.in/) ಪ್ರಕಟಿಸಲಾಗಿರುತ್ತದೆ ಎಂದು ಶಿಕ್ಷಣ ಇಲಾಖೆಯ ಕಾರ್ಯ ನಿರ್ವಾಹಕ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.

ಈ ಹಿಂದೆ ನೀಡಲಾದ ಪ್ರವೇಶ ಪತ್ರಗಳ ಬದಲಾಗಿ ಪರಿಷ್ಕೃತ ದಿನಾಂಕದೊಂದಿಗೆ ಲಭ್ಯ ಮಾಡಲಾಗಿರುವ ಮಾದರಿ ಪ್ರವೇಶ ಪತ್ರಗಳನ್ನು ಶಾಲೆಯ ಮುಖ್ಯ ಶಿಕ್ಷಕರು Download ಮಾಡಿಕೊಂಡು ಪ್ರವೇಶ ಪತ್ರದಲ್ಲಿ SATS ID, ಶಾಲೆಯ ಡೈಸ್ ಸಂಕೇತ ಮತ್ತು ವಿಳಾಸ, ವಿದ್ಯಾರ್ಥಿಯ ಹೆಸರು, ವಿದ್ಯಾರ್ಥಿಯ ಮಾಧ್ಯಮ ಇನ್ನಿತರೆ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ವಿತರಿಸುವುದು ಹಾಗೂ ಯಾವುದೇ ವಿದ್ಯಾರ್ಥಿಗಳು ಮಾಹಿತಿಯ ಕೊರತೆಯಿಂದಾಗಿ ಮೌಲ್ಯಾಂಕನದಿಂದ ವಂಚಿತರಾಗದಂತೆ ಕ್ರಮವಹಿಸಲು ಎಲ್ಲಾ ಹಂತದ ಅಧಿಕಾರಿಗಳಿಗೆ ಮತ್ತು ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ.
