ಖಾಲಿಸ್ತಾನಿ ಬೆಂಬಲಿಗರು ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಟ್ಟಡದಲ್ಲಿದ್ದ ರಾಷ್ಟ್ರಧ್ವಜವನ್ನು ಕೆಳಗಿಳಿಸಿದ ಬೆನ್ನಲ್ಲೇ, ಇದೀಗ ಭಾರತೀಯ ಹೈಕಮಿಷನ್ ಕಟ್ಟಡವನ್ನು ಬೃಹತ್ ತ್ರಿವರ್ಣ ಧ್ವಜವು ಅಲಂಕರಿಸಿದೆ.
ಲಂಡನ್‌ನ ಆಲ್ಡ್‌ವಿಚ್‌ನಲ್ಲಿರುವ ಇಂಡಿಯಾ ಹೌಸ್‌ನಲ್ಲಿ ಬೃಹತ್ ರಾಷ್ಟ್ರಧ್ವಜದ ಛಾಯಾಚಿತ್ರವು ವೈರಲ್ ಆಗಿದೆ.
ಬೃಹತ್ ರಾಷ್ಟ್ರಧ್ವಜವಿರುವ ಚಿತ್ರವನ್ನು ಹಂಚಿಕೊಂಡಿರುವ ಬಿಜೆಪಿಯ ರಾಷ್ಟ್ರೀಯ ವಕ್ತಾರ ಜೈವೀರ್ ಶೆರ್ಗಿಲ್, ಝಂಡಾ ಊಂಚಾ ರಹೇ ಹಮಾರಾ ಎಂದು ಬರೆದುಕೊಂಡಿದ್ದಾರೆ. ಅದಲ್ಲದೇ, ಲಂಡನ್‌ನಲ್ಲಿನ ಭಾರತೀಯ ಹೈಕಮಿಷನ್‌ನಲ್ಲಿನ ತ್ರಿವರ್ಣ ಧ್ವಜಕ್ಕೆ ಅವಮಾನಿಸಲು ಯತ್ನಿಸಿದ ದುಷ್ಕರ್ಮಿಗಳ ವಿರುದ್ಧ ಬ್ರಿಟನ್ ಸರ್ಕಾರ ಕ್ರಮ ಕೈಗೊಳ್ಳಬೇಕು. ರಾಷ್ಟ್ರ ಸೇವೆ ಹಾಗೂ ರಾಷ್ಟ್ರ ಸಂರಕ್ಷಣೆಯಲ್ಲಿ ಪಂಜಾಬ್ ಮತ್ತು ಪಂಜಾಬಿಗಳು ಅದ್ಭುತ ದಾಖಲೆ ಹೊಂದಿದ್ದಾರೆ. ಬ್ರಿಟನ್‌ನಲ್ಲಿ ಕುಳಿತಿರುವ ಕೆಲವರು ಪಂಜಾಬ್ ಅನ್ನು ಪ್ರತಿನಿಧಿಸಲ್ಲ ಎಂದು ಬರೆದುಕೊಂಡಿದ್ದಾರೆ.

ಖಲಿಸ್ತಾನಿ ಬೆಂಬಲಿಗರೊಬ್ಬರು ರಾಷ್ಟ್ರಧ್ವಜವನ್ನು ಕೆಳಗಿಳಿಸುತ್ತಿರುವ ದೃಶ್ಯಗಳು ರಾಷ್ಟ್ರವನ್ನು ಕೆರಳಿಸಿತ್ತು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಪ್ರತಿಕ್ರಿಯೆಗಳನ್ನು ಉಂಟುಮಾಡಿತು. ಖಲಿಸ್ತಾನ್ ಧ್ವಜವನ್ನು ಎಸೆಯುತ್ತಿರುವುದನ್ನು ನೋಡಿದ ಹೈಕಮಿಷನ್ ಅಧಿಕಾರಿಯ ದಿಟ್ಟ ಕ್ರಮವನ್ನು ಹಲವರು ಶ್ಲಾಘಿಸಿದ್ದಾರೆ.
ಭಾರತೀಯ ಧ್ವಜವನ್ನು ಕೆಳಗಿಳಿಸಿರುವ ವಿಡಿಯೋಗಳು ಆನ್‌ಲೈನ್‌ನಲ್ಲಿ ಹರಿದಾಡಲು ಪ್ರಾರಂಭಿಸಿದ ನಂತರ ವಿದೇಶಾಂಗ ಸಚಿವಾಲಯವು ಭಾನುವಾರ ಸಂಜೆ ಬ್ರಿಟಿಷ್ ಡೆಪ್ಯೂಟಿ ಹೈಕಮಿಷನರ್ ಕ್ರಿಸ್ಟಿನಾ ಸ್ಕಾಟ್ ಅವರನ್ನು ಕರೆಸಿದೆ.
ಸಚಿವಾಲಯ ಖಲಿಸ್ತಾನಿ ಪ್ರತಿಭಟನಾಕಾರರನ್ನು ಹೈಕಮಿಷನ್ ಆವರಣಕ್ಕೆ ಪ್ರವೇಶಿಸಲು ಅನುಮತಿಸಿರುವುದು ಭದ್ರತಾ ಲೋಪವಾಗಿದೆ. ಇದರ ಸಂಪೂರ್ಣ ವಿವರಣೆಯನ್ನು ನೀಡಬೇಕು ಎಂದು ಕ್ರಿಸ್ಟಿನಾ ಸ್ಯಾಟ್ ಅವರಿಗೆ ಸೂಚಿಸಿದೆ.
ವಿಯೆನ್ನಾ ಒಪ್ಪಂದದಂತೆ ಬ್ರಿಟನ್ ಸರ್ಕಾರದ ಕರ್ತವ್ಯಗಳನ್ನು ಕೂಡ ಬ್ರಿಟಿಷ್ ಅಧಿಕಾರಿಗಳಿಗೆ ನೆನಪಿಸಲಾಗಿದೆ ಎಂದು ಹೇಳಿರುವ ವಿದೇಶಾಂಗ ಸಚಿವಾಲಯ, ಭಾರತೀಯ ರಾಜತಾಂತ್ರಿಕ ಆವರಣಗಳು ಮತ್ತು ಸಿಬ್ಬಂದಿಗಳ ಭದ್ರತೆಯ ಬಗ್ಗೆ ಬ್ರಿಟನ್ ಸರ್ಕಾರ ಹೊಂದಿರುವ ಉದಾಸೀನ ಮನೋಭಾವ ಒಪ್ಪಿಕೊಳ್ಳುವಂತದ್ದಲ್ಲ ಎಂದು ಹೇಳಿದೆ. ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿತ್ತು.

ಘಟನೆಗೆ ಸಂಬಂಧಿಸಿದಂತೆ ಬ್ರಿಟನ್‌ನ ವಿದೇಶಾಂಗ ಕಾಮನ್‌ವೆಲ್ತ್ ಮತ್ತು ಅಭಿವೃದ್ಧಿ ವ್ಯವಹಾರಗಳ ರಾಜ್ಯ ಸಚಿವ ಲಾರ್ಡ್ ತಾರಿಕ್ ಅಹ್ಮದ್ ಟ್ವೀಟ್ ಮಾಡಿದ್ದು, ಭಾರತೀಯ ಹೈಕಮಿಷನ್ ಮೇಲಿನ ದಾಳಿಯಿಂದ ಆತಂಕಗೊಂಡಿದ್ದೇನೆ ಎಂದಿದ್ದಾರೆ. ಅದರ ಜೊತೆಗೆ ಇಂತಹ ದಾಳಿ ಒಪ್ಪಿಕೊಳ್ಳುವಂತದ್ದಲ್ಲ. ಬ್ರಿಟನ್ ಸರ್ಕಾರ ಯಾವಾಗಲೂ ಭಾರತೀಯ ಹೈಕಮಿಷನ್‌ನ ಭದ್ರತೆಯನ್ನು ಗಂಭೀರವಾಗಿ ಪರಿಗಣಿಸುತ್ತದೆ ಎಂದು ಅವರು ಹೇಳಿದ್ದಾರೆ.
