ಇಂದೋರ್ : ರಾಮನವಮಿಯ ಸಂದರ್ಭದಲ್ಲಿ ಭಾರೀ ಕಾಲ್ತುಳಿತದ ನಡುವೆ ಇಂದೋರ್ ದೇವಸ್ಥಾನದ ಮೇಲ್ಛಾವಣಿ ಕುಸಿದು 30 ಕ್ಕೂ ಹೆಚ್ಚು ಜನರು ಮೆಟ್ಟಿಲು ಬಾವಿಗೆ ಬಿದ್ದ ಘಟನೆ ನಡೆದಿದೆ. ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, 17 ಜನರನ್ನು ರಕ್ಷಿಸಲಾಗಿದೆ.
ಘಟನೆಯಲ್ಲಿ ಸಿಲುಕಿದ್ದ ಇಬ್ಬರು ಮಕ್ಕಳು ಸೇರಿದಂತೆ ಒಂಬತ್ತು ಭಕ್ತರನ್ನು ರಕ್ಷಿಸಿ ಆಸ್ಪತ್ರೆಗೆ ರವಾನಿಸಲಾಗಿದೆ. ಸುಮಾರು 25 ಜನರು ಇನ್ನೂ ಒಳಗೆ ಸಿಲುಕಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಪೊಲೀಸರು ಮತ್ತು ರಕ್ಷಣಾ ತಂಡಗಳು ರಕ್ಷಣಾ ಕಾರ್ಯಚರಣೆಯಲ್ಲಿ ತೊಡಗಿವೆ.

ರಾಮನವಮಿ ಪ್ರಯುಕ್ತ ಭಕ್ತರ ನೂಕುನುಗ್ಗಲು ನಡುವೆ ಬೆಳೇಶ್ವರ ಮಹಾದೇವ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ಭಾರೀ ಕಾಲ್ನಡಿಗೆಯಿಂದಾಗಿ ದೇವಾಲಯದ ನೆಲವು ಕುಸಿದ ಪರಿಣಾಮ ಜನರು ಮೆಟ್ಟಿಲು ಬಾವಿಗೆ ಬಿದ್ದಿದ್ದಾರೆ. ಹಗ್ಗಗಳನ್ನು ಬಳಸಿ ಭಕ್ತರನ್ನು ಬಾವಿಯಿಂದ ಹೊರಕ್ಕೆ ಕರೆತರಲಾಗುತ್ತಿದೆ.
ಇದುವರೆಗೆ 17 ಮಂದಿಯನ್ನು ರಕ್ಷಿಸಲಾಗಿದ್ದು, ಉಳಿದವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಪ್ರಯತ್ನ ನಡೆಯುತ್ತಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಕೂಡ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಇಂಧೋರ್‌ನಲ್ಲಿ ಸಂಭವಿಸಿದ ದುರ್ಘಟನೆಯಿಂದ ತೀವ್ರ ನೋವಾಗಿದೆ. ಸಿಎಂ ಚೌಹಾಣ್ ಶಿವರಾಜ್ ಅವರೊಂದಿಗೆ ಮಾತನಾಡಿ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದಿದ್ದೇನೆ. ರಾಜ್ಯ ಸರ್ಕಾರವು ತ್ವರಿತ ಗತಿಯಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ಮುನ್ನಡೆಸುತ್ತಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
