ತಮಿಳುನಾಡಿನ ದೇವಸ್ಥಾನದಿಂದ ಕಳುವಾಗಿದ್ದ 500 ವರ್ಷಗಳಷ್ಟು ಪುರಾತನ ಹನುಮಾನ ವಿಗ್ರಹವನ್ನು ಆಸ್ಟ್ರೇಲಿಯಾ ಭಾರತಕ್ಕೆ ಹಿಂದಿರುಗಿಸಿದೆ. ಆಸ್ಟ್ರೇಲಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಹಸ್ತಾಂತರಿಸಲಾಗಿದೆ ಎಂದು ಕೇಂದ್ರ ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವ ಜಿ.ಕಿಶನ್ ರೆಡ್ಡಿ ಟ್ವೀಟ್ ಮಾಡಿದ್ದಾರೆ.
ದೇಶದ ಎಲ್ಲಾ ಅಮೂಲ್ಯ ವಸ್ತುಗಳನ್ನ ಮರಳಿ ತರಲು ಭಾರತ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಹೇಳಿದ್ದು, ಈ ಟ್ವೀಟ್‌ನಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಟ್ಯಾಗ್ ಮಾಡಿದ್ದಾರೆ.
14-15ನೇ ಶತಮಾನದಲ್ಲಿ ಚೋಳರ ಕಾಲದಲ್ಲಿ ವಿಷ್ಣು ದೇವಾಲಯದಿಂದ ಹನುಮಂತನ ಲೋಹದ ವಿಗ್ರಹವನ್ನ ಕಳವು ಮಾಡಲಾಗಿತ್ತು. ಇದುವರೆಗೆ ವಿವಿಧ ದೇಶಗಳಿಂದ 251 ಪುರಾತನ ವಸ್ತುಗಳನ್ನ ಪಡೆಯಲಾಗಿದೆ ಎಂದು ತಿಳಿಸಿದರು. ನಮ್ಮ ಅಮೂಲ್ಯ ಪರಂಪರೆಯನ್ನು ಮನೆಗೆ ಮರಳಿ ತರಲು ನಾವು ನಿರಂತರವಾಗಿ ಶ್ರಮಿಸುತ್ತಿದ್ದೇವೆ ಎಂದು ಪ್ರಧಾನಿ ಮೋದಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ತಮಿಳುನಾಡಿನ ಅರಿಯಲೂರು ಜಿಲ್ಲೆಯ ಪೊಟ್ಟವೆಲ್ಲಿ ವೆಲ್ಲೂರು ಪ್ರದೇಶದಲ್ಲಿರುವ ಶ್ರೀವರತರಾಜ ಪೆರುಮಾಳ್ ಎಂಬ ವಿಷ್ಣು ದೇವಾಲಯದಿಂದ ವಿಗ್ರಹವನ್ನ ಕಳವು ಮಾಡಲಾಗಿದೆ. ಇದನ್ನ 1961ರಲ್ಲಿ ಆಗಿನ ಫ್ರೆಂಚ್ ಇನ್ಸ್ಟಿಟ್ಯೂಟ್ ಆಫ್ ಪಾಂಡಿಚೇರಿ ದಾಖಲಿಸಿದೆ. ವಿಗ್ರಹವನ್ನು ಫೆಬ್ರವರಿ ಕೊನೆಯ ವಾರದಲ್ಲಿ ಭಾರತಕ್ಕೆ ಹಿಂತಿರುಗಿಸಲಾಯಿತು ಮತ್ತು ಏಪ್ರಿಲ್ 18ರಂದು ತಮಿಳುನಾಡು ಐಡಲ್ ವಿಂಗ್‌ಗೆ ಪ್ರಕರಣದ ಆಸ್ತಿಯಾಗಿ ಹಸ್ತಾಂತರಿಸಲಾಯಿತು.

