ಉಡುಪಿ:ಇಸ್ಪೀಟು ಜುಗಾರಿ ಹಾಗೂ ಮಟ್ಕಾ ಜುಗಾರಿ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲೆಯ ವಿವಿಧ ಕಡೆ ದಾಳಿ ಮಾಡಿದ ಪೊಲೀಸರು 11 ಮಂದಿಯನ್ನು ವಶಕ್ಕೆ ಪಡೆದು 21,730 ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.
ಗಂಗೊಳ್ಳಿ ಠಾಣಾ ಪೊಲೀಸರು ಠಾಣಾ ವ್ಯಾಪ್ತಿಯ ತ್ರಾಸಿ ಗ್ರಾಮದ ಹೆಚ್.ಪಿ ಪೆಟ್ರೋಲ್ ಬಂಕ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಡುತ್ತಿದ್ದ ಕುಂದಾಪುರದ ಹೊಸಾಡು ಗ್ರಾಮದ ಪ್ರಕಾಶ್ ಶೆಟ್ಟಿಗಾರ(46) ನನ್ನು ಹಾಗೂ ಆತನ ಬಳಿಯಿಂದ 530 ರೂ. ನಗದನ್ನು ಮತ್ತು ಪಡುಬಿದ್ರೆ ಠಾಣಾ ಪೊಲೀಸರು ಠಾಣಾ ವ್ಯಾಪ್ತಿಯ ಸಾಂತೂರು ಗ್ರಾಮದ ಮುದರಂಗಡಿ ಮೀನು ಮಾರ್ಕೆಟ್‌ಬಳಿ ಸಾರ್ವಜನಿಕ ಸ್ಥಳದಲ್ಲಿ ಉಡುಪಿಯ ಪುತ್ತೂರಿನ ದಿನೇಶ್ ಶೆಟ್ಟಿ (54) ಎಂಬಾತನನ್ನು ವಶಕ್ಕೆ ಪಡೆದು ಆತ ಸಾರ್ವಜನಿಕರಿಂದ ಸಂಗ್ರಹಿಸಿದ 1,410 ರೂ.ನಗದನ್ನು ವಶಪಡಿಸಿಕೊಂಡಿದ್ದಾರೆ.
ಮತ್ತೊಂದೆಡೆ ಪಡುಬಿದ್ರಿ ಠಾಣಾ ಪೊಲೀಸರು ಠಾಣಾ ವ್ಯಾಪ್ತಿಯ ಹೆಜಮಾಡಿ ಗ್ರಾಮದ ಗುಂಡಿ ಸ್ಮಶಾನದ ಎದುರುಗಡೆ ಇರುವ ಗಾಡಿ ಚೌಕ ಎಂಬಲ್ಲಿನ ಹಾಡಿಯಲ್ಲಿ ಇಸ್ಪೀಟು ಜುಗಾರಿ ಆಡುತ್ತಿದ್ದ ಚೇತನ್ ಪೂಜಾರಿ (34), ಅಭಿಜಿತ್ (39), ಗಣೇಶ (27), ನಿಶಾನ್ ಬಂಗೇರ ಎಂಬ ನಾಲ್ವರನ್ನು ವಶಕ್ಕೆ ಪಡೆದು 1,190 ರೂ. ನಗದನ್ನು ಹಾಗೂ ಉಡುಪಿ ಠಾಣಾ ಪೊಲೀಸರು 76 ಬಡಗುಬೆಟ್ಟು ಗ್ರಾಮದ ಮೀನು ಮಾರ್ಕೆಟ್ ಹಿಂಭಾಗ ಖಾಲಿ ಜಾಗದಲ್ಲಿನ ಬಳಿ ಸಾರ್ವಜನಿಕ ಸ್ಥಳದಲ್ಲಿ ಬಾಗಲಕೋಟೆ ಮೂಲದ ಅಮೀನಸಾಬಿ ಮೊಕಾಶಿ (48), ಶಿವಪ್ಪ (38),ಭರಮಪ್ಪ (48), ಅಮೀನ್ ಸಾಹೇಬ್ (35), ಉತ್ತರ ಕನ್ನಡ ಜಿಲ್ಲೆಯ ಸುಬ್ರಮಣ್ಯ (30) ಎಂಬ ಐವರನ್ನು ವಶಕ್ಕೆ ಪಡೆದು 18,600 ರೂ. ನಗದು ವಶಪಡಿಸಿಕೊಂಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಪಡುಬಿದ್ರೆ ಠಾಣೆಯಲ್ಲಿ 2 ಹಾಗೂ ಗಂಗೊಳ್ಳಿ ಠಾಣೆಯಲ್ಲಿ ಮತ್ತು ಉಡುಪಿ ನಗರ ಠಾಣೆಯಲ್ಲಿ ತಲಾ ಒಂದು ಸೇರಿ ಒಟ್ಟು ನಾಲ್ಕು ಪ್ರತ್ಯೇಕ ಪ್ರಕರಣ ದಾಖಲಾಗಿದೆ.
