ನ್ಯೂಯಾರ್ಕ್: ಕೇವಲ 20 ನಿಮಿಷದಲ್ಲಿ 2 ಲೀಟರ್ ನೀರು ಕುಡಿದು ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.
ಇಂಡಿಯಾನಾದ ಆಶ್ಲೇ ಸಮ್ಮರ್ಸ್ ಮೃತಪಟ್ಟ ಮಹಿಳೆ.
ಆಕೆಯ ಸಹೋದರ ಡೆವೊನ್ ಮಿಲ್ಲರ್, ತನ್ನ ಸಹೋದರಿ ಸಾವಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ.

ಕಡಿಮೆ ಅವಧಿಯಲ್ಲಿ ಹೆಚ್ಚಿನ ಪ್ರಮಾಣದ ನೀರು ಕುಡಿಲು ಆಶ್ಲೇ ಮುಂದಾಗಿದ್ದಳು. ಈ ವೇಳೆ ಆಕೆ ಕುಸಿದು ಬಿದ್ದಳು. ನಂತರ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ರಕ್ತದಲ್ಲಿನ ಸೋಡಿಯಂ ಪ್ರಮಾಣವು ಅಸಹಜವಾಗಿ ಕಡಿಮೆ ಆಗಿರುವಾಗ ಉಂಟಾಗುವ ನೀರಿನ ವಿಷತ್ವ ಎಂದು ಕರೆಯಲ್ಪಡುವ ಹೈಪೋನಾಟ್ರೀಮಿಯಾದಿಂದ ಆಕೆ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದರು.
ನೀರಿನ ವಿಷತ್ವದ ಬಗ್ಗೆ ವೈದ್ಯರು ಮಾತನಾಡುವಾಗ ನಮಗೆ ಆಘಾತವಾಯಿತು. ಹೀಗೂ ಸಮಸ್ಯೆಗಳು ಎದುರಾಗುತ್ತವೆಯೇ ಎಂಬ ಪ್ರಶ್ನೆ ನಮ್ಮನ್ನು ಕಾಡಿತು ಎಂದು ಆಶ್ಲೇ ಸಹೋದರ ಹೇಳಿಕೊಂಡಿದ್ದಾರೆ
ಅಪರೂಪದ ಸಂದರ್ಭದಲ್ಲಿ ನೀರಿನ ವಿಷತ್ವವು ಮಾರಕವಾಗಬಹುದು. ಕಡಿಮೆ ಸಮಯದಲ್ಲಿ ಹೆಚ್ಚು ನೀರು ಸೇವಿಸಿದಾಗ ಅಥವಾ ಆರೋಗ್ಯ ಪರಿಸ್ಥಿತಿಗಳಿಂದಾಗಿ ಮೂತ್ರಪಿಂಡಗಳು ಹೆಚ್ಚು ನೀರನ್ನು ಹಿಡಿದಿಟ್ಟುಕೊಂಡರೆ ಇದು ಸಂಭವಿಸುತ್ತದೆ. ನೀರಿನ ವಿಷತ್ವದ ಲಕ್ಷಣಗಳೆಂದರೆ ಸಾಮಾನ್ಯವಾಗಿ ಅಸ್ವಸ್ಥತೆ, ಸ್ನಾಯು ಸೆಳೆತ, ನೋವು, ವಾಕರಿಕೆ ಮತ್ತು ತಲೆನೋವು ಎಂದು ವೈದ್ಯರು ವಿವರಿಸಿದ್ದಾರೆ ಎಂದು ಆತ ಹೇಳಿದ್ದಾರೆ.

