ಹುಬ್ಬಳ್ಳಿ: ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ಗಣೇಶ ಚತುರ್ಥಿ ಹಬ್ಬ ಆಚರಣೆ ವಿರೋಧಿಸಿ ಅಂಜುಮನ್-ಎ-ಇಸ್ಲಾಂ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಧಾರವಾಡ ಪೀಠ ಶುಕ್ರವಾರ ವಜಾಗೊಳಿಸಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡಿ ನಿರ್ಣಯ ಅಂಗೀಕರಿಸಿರುವುದನ್ನು ವಿರೋಧಿಸಿ ಅಂಜುಮನ್-ಎ-ಇಸ್ಲಾಂ ಹೈಕೋರ್ಟ್ ಗೆ ಮನವಿ ಸಲ್ಲಿಸಿತ್ತು.
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಐದು ವರ್ಷಗಳ ಅನುಮತಿಗೆ ಹುಬ್ಬಳ್ಳಿ-ಧಾರವಾಡ ಪಾಲಿಕೆ ಠರಾವು ಪಾಸ್ ಮಾಡಿತ್ತು. ಇದನ್ನು ವಿರೋಧಿಸಿದ ಅಂಜುಮನ್ ಸಂಸ್ಥೆ, ಹುಬ್ಬಳ್ಳಿ-ಧಾರವಾಡ ಪಾಲಿಕೆ ಠರಾವಿಗೆ ತಡೆಯಾಜ್ಞೆ ನೀಡುವಂತೆ ಧಾರವಾಡ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಶುಕ್ರವಾರ ಈ ಅರ್ಜಿ ವಿಚಾರಣೆ ನಡೆಸಿದ ಧಾರವಾಡ ಕೋರ್ಟ್, ಅಂಜುಮನ್ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಅಲ್ಲದೇ ಪಾಲಿಕೆ ಆಯುಕ್ತರಿಗೆ ಅರ್ಜಿ ಸಲ್ಲಿಸಿ ಎಂದು ಸೂಚನೆ ನೀಡಿದೆ.

ವಿಶೇಷವೆಂದರೆ, ಕಳೆದ ವರ್ಷ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಚತುರ್ಥಿ ಆಚರಣೆಗೆ ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿತ್ತು. ಈ ಬಾರಿಯೂ ಹೈಕೋರ್ಟ್ ಅನುಮತಿ ನೀಡಿದೆ.
ಅಂಜುಮನ್-ಎ-ಇಸ್ಲಾಂ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಹೈಕೋರ್ಟ್, ಮೈದಾನವು ಹುಬ್ಬಳ್ಳಿ-ಧಾರವಾಡ ನಗರಸಭೆಯ ಆಸ್ತಿಯಾಗಿದ್ದು, ಅವರು ಬಯಸಿದವರಿಗೆ ಭೂಮಿಯನ್ನು ನೀಡಬಹುದು ಎಂದು ಹೇಳಿದೆ.
