ತಿರುವನಂತಪುರ: ಮಲಗಿದ್ದ ವ್ಯಕ್ತಿಯೋರ್ವನ ಮೇಲೆ ರೋಡ್ ರೋಲರ್ ಹರಿದ ಪರಿಣಾಮ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಕೇರಳದ ಅಂಚಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ವ್ಯಕ್ತಿಯು ದುರಂತ ಸಂಭವಿಸಿದ ಸ್ಥಳದಿಂದ ಒಂದೆರಡು ಕಿಲೋಮೀಟರ್ ದೂರದಲ್ಲಿ ವಾಸಿಸುತ್ತಿದ್ದು, ಮೀನು ಹಿಡಿಯಲು ಅಲ್ಲಿಗೆ ಬಂದಿದ್ದ ಎಂದು ವರದಿಯಾಗಿದೆ.

ಅಂಚಲ್ ಬೈಪಾಸ್ ಬಳಿಯ ಕುರಿಶುಮುಕ್ಕು ಎಂಬಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಆ ಪ್ರದೇಶದಲ್ಲಿ ರೋಡ್ ರೋಲರ್ ನ್ನು ನಿಲ್ಲಿಸಲಾಗಿದ್ದು, ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ವಾಹನವನ್ನು ನಿಲ್ಲಿಸಿದ್ದ ಸ್ಥಳದಿಂದ ಸ್ಥಳಾಂತರಿಸುವ ವೇಳೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತಪಟ್ಟವನಿಗೆ ಮದ್ಯ ಸೇವಿಸುವ ಅಭ್ಯಾಸವಿತ್ತು. ರೋಡ್ ರೋಲರ್ ಮುಂದೆ ಮಲಗಿದ್ದ ಆತ ಕುಡಿದು ಬಿದ್ದಿದ್ದನೇ ಎಂದು ಪತ್ತೆ ಹಚ್ಚುತ್ತಿದ್ದೇವೆ.
ಇಂದು ಐಪಿಸಿ ಸೆಕ್ಷನ್ 304 ಎ (ನಿರ್ಲಕ್ಷ್ಯದಿಂದ ಸಾವು) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ವಿಚಾರಣೆ ಪ್ರಕ್ರಿಯೆ ಆರಂಭವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ರೋಡ್ ರೋಲರ್ ಚಾಲಕನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ, ಆದರೆ ಇನ್ನೂ ಬಂಧಿಸಲಾಗಿಲ್ಲ. “ಆತನ ತಪ್ಪು ಕಾಣುತ್ತಿಲ್ಲ. ಆದರೆ, ಮುಂದಿನ ಕ್ರಮವನ್ನು ನಿರ್ಧರಿಸಲು ನಾವು ಮರಣೋತ್ತರ ಪರೀಕ್ಷೆಯ ಫಲಿತಾಂಶಗಳಿಗಾಗಿ ಕಾಯುತ್ತೇವೆ” ಎಂದು ಅಧಿಕಾರಿ ಹೇಳಿದ್ದಾರೆ.

