ಓಸ್ಲೋ: ಕಿಂಗ್ ಹರಾಲ್ಡ್ ಹಾಗೂ ರಾಣಿ ಸೋಂಜಾ ಅವರ ಹಿರಿಯ ಪುತ್ರಿ ನಾರ್ವೆಯ ರಾಜಕುಮಾರಿ ಮಾರ್ಥಾ ಲೂಯಿಸ್ ಮುಂದಿನ ವರ್ಷ ಆಗಸ್ಟ್ 31ರಂದು ಮದುವೆಯಾಗುವುದಾಗಿ ಘೋಷಿಸಿದ್ದಾರೆ. ಅದರಲ್ಲೇನು ವಿಶೇಷ ಅಂತೀರಾ…ವಿಸಾಏಷ ಇದೆ…ಅದೂ ಅವರು ವಿವಾಹವಾಗಲು ಹೊರಟಿರೋದು ಮಾಂತ್ರಿಕನನ್ನು…ಹೌದು, ರಾಜಕುಮಾರಿ, ಮಾಂತ್ರಿಕ ಶಾಮನ್ ಡ್ಯುರೆಕ್ ವೆರೆಟ್ ಅವರನ್ನು ಮದುವೆಯಾಗುವುದಾಗಿ ಘೋಷಿಸಿದ್ದಾರೆ.
51 ವರ್ಷದ ರಾಜಕುಮಾರಿ ಮಾಂತ್ರಿಕ, ಅಮೆರಿಕದ ಖ್ಯಾತ ಚಿಂತಕ, ಪ್ರಕೃತಿ ಚಿಕಿತ್ಸಕನಾದ ಡ್ಯುರೆಕ್ ವೆರೆಟ್ ಅವರೊಂದಿಗೆ 2022ರ ಜೂನ್‌ನಲ್ಲಿ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದರು. ಈ ಮೂಲಕ ಭಾರೀ ಸುದ್ದಿಯಲ್ಲಿದ್ದರು. ಏಕೆಂದರೆ ಡ್ಯುರೆಕ್‌ನನ್ನು ವಂಚಕ, ಹಣಕ್ಕಾಗಿ ರಾಜಕುಮಾರಿಯನ್ನು ಬಳಸಿಕೊಳ್ಳುತ್ತಿರುವುದಾಗಿ ಸ್ಥಳೀಯವಾಗಿ ವೀಡಿಯೋಗಳು ಹರಿದಾಡಿದ್ದವು.
ಈ ಹಿನ್ನೆಲೆ ಮಾರ್ಥಾ ಲೂಯಿಸ್ ಡ್ಯುರೆಕ್ ವೆರೆಟ್ ಅವರನ್ನು ಮದುವೆಯಾಗಲು ಅಧಿಕೃತ ರಾಜಮನೆತನದ ಯಾವುದೇ ಕರ್ತವ್ಯ ಹಾಗೂ ಸ್ಥಾನಮಾನಗಳನ್ನು ನಿರ್ವಹಿಸುವುದಿಲ್ಲ ಎಂದು ತಿಳಿಸಿದ್ದರು. ತನ್ನ ರಾಜಮನೆತನದ ಬಿರುದನ್ನು ಬಳಸುವುದಿಲ್ಲ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಅಥವಾ ಯಾವುದೇ ವಾಣಿಜ್ಯ ಸಂಸ್ಥೆಯಲ್ಲಿ ರಾಯಲ್ ಪದವನ್ನು ಬಳಸುವುದಿಲ್ಲ ಎಂದಿದ್ದರು.
ಇದೀಗ ಜೋಡಿ ತಮ್ಮ ಮದುವೆಯ ದಿನಾಂಕವನ್ನು ಘೋಷಿಸಿಕೊಂಡಿದ್ದಾರೆ. ಮಾತ್ರವಲ್ಲದೇ 1968ರಲ್ಲಿ ಸಾಮಾನ್ಯ ಮಹಿಳೆಯಾಗಿದ್ದ ಸೋಂಜಾ ಅವರನ್ನು ವಿವಾಹವಾಗಿದ್ದ ಕಿಂಗ್ ಹರಾಲ್ಡ್ ಅವರ ಆಶೀರ್ವಾದವನ್ನೂ ಜೋಡಿ ಪಡೆದುಕೊಂಡಿದೆ.

ನೈಋತ್ಯ ನಾರ್ವೆಯಲ್ಲಿ ಮದುವೆ :
ಬುಧವಾರ ಪ್ರತ್ಯೇಕ ಹೇಳಿಕೆಯಲ್ಲಿ ರಾಜ, ರಾಣಿ, ಹಾಗೂ ಕ್ರೌನ್ ಪ್ರಿನ್ಸ್ ಹಾಕಾನ್ ಜೋಡಿಯನ್ನು ಅಭಿನಂದಿಸಿದ್ದಾರೆ. ಡ್ಯುರೆಕ್ ವೆರೆಟ್ ಅವರನ್ನು ಕುಟುಂಬಕ್ಕೆ ಸ್ವಾಗತಿಸಲು ಸಂತೋಷವಾಗಿದೆ ಎಂದಿದ್ದಾರೆ.
ಇಬ್ಬರ ಮದುವೆ ನೈಋತ್ಯ ನಾರ್ವೆಯಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಗುರುತಿಸಲಾದ ಫ್ಜೋರ್ಡ್ ತೀರದಲ್ಲಿರುವ ಗೈರಾಂಜರ್ ಪಟ್ಟಣದಲ್ಲಿ ನಡೆಯಲಿದೆ.
ರಾಜಕುಮಾರಿಗಿದು ಎರಡನೇ ಮದುವೆ :
ರಾಜಕುಮಾರಿ ಮಾರ್ಥಾ ಲೂಯಿಸ್ ಈ ಹಿಂದೆ ಖ್ಯಾತ ಬರಹಗಾರ ಅರಿ ಬೆಹ್ನ್ ಅವರನ್ನು ಮದುವೆಯಾಗಿದ್ದರು. ಬಳಿಕ ವಿಚ್ಛೇದಿತರಾಗಿ 3 ವರ್ಷಗಳ ಬಳಿಕ 2019ರಲ್ಲಿ ಬೆಹ್ನ್ ಆತ್ಮಹತ್ಯೆಗೆ ಶರಣಾಗಿದ್ದರು. ಮಾರ್ಥಾ ಲೂಯಿಸ್‌ಗೆ ಈಗಾಗಲೇ ಮೂವರು ಮಕ್ಕಳಿದ್ದಾರೆ.
