ಹೊಸದಿಲ್ಲಿ: ಶ್ರೀಲಂಕಾ ವಿರುದ್ಧ ಸೂಪರ್-4ರ ಪಂದ್ಯದಲ್ಲಿ ಸೋತಿರುವ ಪಾಕಿಸ್ತಾನ ಏಷ್ಯಾ ಕಪ್ ಫೈನಲ್ ರೇಸ್‌ನಿಂದ ಹೊರ ಬಿದ್ದಿತ್ತು. ಇದರಿಂದ ಬೇಸರಗೊಂಡಿದ್ದ ನಾಯಕ ಬಾಬರ್ ಆಝಮ್ ಡ್ರೆಸ್ಸಿಂಗ್ ಕೊಠಡಿಯಲ್ಲಿ ಹಿರಿಯ ಆಟಗಾರರ ವಿರುದ್ಧ ಕಿಡಿಕಾರಿದ್ದಾರೆ ಎಂಬುದಾಗಿ ಪಾಕ್ ಮಾಧ್ಯಮಗಳು ವರದಿ ಮಾಡಿವೆ.
ನಾಲ್ಕನೇ ಸ್ಥಾನಕ್ಕೆ ಕುಸಿತ :
ಏಷ್ಯಾ ಕಪ್ ಟೂರ್ನಿಗೆ ಆಗಮಿಸುವುದಕ್ಕೂ ಮುನ್ನ ಐಸಿಸಿ ಏಕದಿನ ತಂಡದ ಶ್ರೇಯಾಂಕದಲ್ಲಿ ಪಾಕಿಸ್ತಾನ ನಂ.1 ಪಟ್ಟ ತನ್ನದಾಗಿಸಿಕೊಂಡಿತ್ತು. ಆದರೆ, ಸೂಪರ್-4ರ ಹಂತದಲ್ಲಿ ಭಾರತ ಹಾಗೂ ಶ್ರೀಲಂಕಾ ವಿರುದ್ಧ ಸೋತು ಬಾಬರ್ ಅಝಮ್ ನಾಯಕತ್ವದ ಪಾಕಿಸ್ತಾನದ ಅಗ್ರ ಸ್ಥಾನವು ಭಾರತ ತಂಡದ ವಶವಾಯಿತು. ಇದೀಗ ಏಷ್ಯಾ ಕಪ್ ಪಾಯಿಂಟ್ಸ್ ಟೇಬಲ್‌ನಲ್ಲಿಯೂ ನಾಲ್ಕನೇ ಸ್ಥಾನಕ್ಕೆ ಕುಸಿಯುವ ಮೂಲಕ ಟೂರ್ನಿಯ ಅಭಿಯಾನವನ್ನು ಅಂತ್ಯಗೊಳಿಸಿದೆ.

ಏನಿದು ಗಲಾಟೆ?
ಶ್ರೀಲಂಕಾ ವಿರುದ್ದ ಸೋಲಿನ ಬಳಿಕ ಡ್ರೆಸ್ಸಿಂಗ್ ಕೊಠಡಿಯಲ್ಲಿ ಹಿರಿಯ ಆಟಗಾರರ ಪ್ರದರ್ಶನದ ಬಗ್ಗೆ ಪಾಕಿಸ್ತಾನ ನಾಯಕ ಬಾಬರ್ ಆಝಮ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಂದಿನ ಪಂದ್ಯಗಳಲ್ಲಿ ಹಿರಿಯ ಆಟಗಾರರು ಕಡ್ಡಾಯವಾಗಿ ಉತ್ತಮ ಪ್ರದರ್ಶನ ತೋರಿಸಬೇಕು ಎಂದು ಆಝಮ್ ತಾಕೀತು ಮಾಡಿದ್ದರು. ಇದರಿಂದ ಕೆರಳಿದ ಶಾಹೀನ್ ಶಾ ಅಫ್ರಿದಿ, ‘ಕನಿಷ್ಠ ಉತ್ತಮ ಬ್ಯಾಟಿಂಗ್-ಬೌಲಿಂಗ್ ಪ್ರದರ್ಶನ ತೋರಿದ ಆಟಗಾರರ ಬಗ್ಗೆಯಾದರೂ ಮೆಚ್ಚುಗೆ ವ್ಯಕ್ತಪಡಿಸಿ ಎಂದು ನಾಯಕನ ಮುಖಕ್ಕೆ ಹೊಡೆಯುವಂತೆ ಹೇಳಿದ್ದರು.
ಶಾಹೀನ್ ಅಫ್ರಿದಿ ಮಾತುಗಳು ನಾಯಕ ಬಾಬರ್ ಆಝಮ್‌ಗೆ ಕೆರಳಿಸಿದೆ. ಯಾರು ಉತ್ತಮವಾಗಿ ಆಡುತ್ತಿದ್ದಾರೆ ಹಾಗೂ ಯಾರು ಆಡುತ್ತಿಲ್ಲ ಎಂಬ ಬಗ್ಗೆ ನನಗೂ ಚೆನ್ನಾಗಿ ಗೊತ್ತಿದೆ ಎಂದು ಆಝಮ್ ಕಟುವಾಗಿ ಹೇಳಿದರು.
ಈ ವೇಳೆ ಬಾಬರ್ ಆಝಮ್ ಹಾಗೂ ಶಾಹೀನ್ ಶಾ ಅಫ್ರಿದಿ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಮೊಹಮ್ಮದ್ ರಿಝ್ವಾನ್ ಹಾಗೂ ಹೆಡ್ ಕೋಚ್ ಪರಿಸ್ಥಿತಿಯನ್ನು ತಣ್ಣಗಾಗಿಸಿದ್ದರು.
ಇದರಿಂದ ಬೇಸರಗೊಂಡ ಬಾಬರ್ ಆಝಮ್ ಯಾರ ಜೊತೆಯೂ ಮಾತನಾಡದೆ ಹಾಗೂ ಸುದ್ದಿಗೋಷ್ಠಿಯಲ್ಲಿಯೂ ಭಾಗವಹಿಸದೆ ನೇರವಾಗಿ ತಂಡದ ಬಸ್ ಕಡೆಗೆ ಒಬ್ಬರೇ ಹೋದರು.

ತನ್ನ ಆರಂಭಿಕ ಪಂದ್ಯದಲ್ಲಿ ನೇಪಾಳ ವಿರುದ್ದ ದೊಡ್ಡ ಅಂತರದಲ್ಲಿ ಗೆಲುವು ಕಂಡಿದ್ದ ಪಾಕಿಸ್ತಾನ ತಂಡ ನಂತರ ಭಾರತ ವಿರುದ್ಧ ಪಂದ್ಯ ಸೋತಿತು. ಒಟ್ಟು ಮೂರು ಅಂಕಗಳ ಮೂಲಕ ಪಾಕಿಸ್ತಾನ ಸೂಪರ್-4ರ ಹಂತಕ್ಕೆ ಅರ್ಹತೆ ಪಡೆದಿತ್ತು.
ಸೂಪರ್-4ರ ತನ್ನ ಮೊದಲನೇ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಗೆಲುವು ಪಡೆದಿದ್ದ ಪಾಕಿಸ್ತಾನ, ಭಾರತ ತಂಡದ ವಿರುದ್ದ 228 ರನ್‌ಗಳಿಂದ ಸೋಲು ಅನುಭವಿಸಿತ್ತು. ನಂತರ ಶ್ರೀಲಂಕಾ ವಿರುದ್ಧವೂ ಪಾಕ್ ಸೋತು ಏಷ್ಯಾ ಕಪ್ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿತು.

