ನವದೆಹಲಿ : ಸೋಮವಾರ ಮೋದಿ ಸಂಪುಟ ಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಒಪ್ಪಿಗೆ ಸಿಕ್ಕಿದ್ದು, ಮಂಗಳವಾರ ಮಹತ್ವದ ಬಿಲ್ ಮಂಡನೆ ಮಾಡಲಾಗಿದೆ. ಮಹಿಳಾ ಮೀಸಲಾತಿ ಮಸೂದೆಯನ್ನು ಕೇಂದ್ರ ಕಾನೂನು ಸಚಿವ ಅರ್ಜುನ್ ಮೇಘವಾಲ್ ಅವರು ಲೋಕಸಭೆಯಲ್ಲಿ ಹೊಸ ಸಂಸತ್ ಭವನದಲ್ಲಿ ಮಂಡಿಸಿದರು.
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಸೀಟುಗಳನ್ನು ಮೀಸಲಿಡುವ ಮಸೂದೆಗೆ ಕೇಂದ್ರ ಸಚಿವ ಸಂಪುಟ ಸೋಮವಾರ ಅನುಮೋದನೆ ನೀಡಿದೆ.
ಈ ನಡುವೆ, ಈ ಮಹಿಳಾ ಮೀಸಲಾತಿ ಬಿಲ್ ನಮ್ಮದು ಎಂದು ವಿಪಕ್ಷಗಳು ಕ್ರೆಡಿಟ್ ತೆಗೆದುಕೊಳ್ಳುವ ಪ್ರಯತ್ನ ಮಾಡಿದ್ದು, ಈ ಹಿನ್ನೆಲೆ ಗದ್ದಲ ಗಲಾಟೆಯ ನಡುವೆಯೇ ಬಿಲ್ ಮಂಡನೆಯಾಗಿದೆ. ‘ನಾರಿ ಶಕ್ತಿ ವಂದನ್ ಅಧಿನಿಯಮ್’ ಎಂದು ಈ ಬಿಲ್ ಅನ್ನು ಕರೆಯಲಾಗಿದೆ. ಆದರೆ, ಲೋಕಸಭೆಯ ಕಲಾಪ ನಾಳೆಗೆ ಮುಂದೂಡಿಕೆಯಾಗಿದೆ. ಈ ಹಿನ್ನೆಲೆ ಈ ಬಿಲ್ ಬಹುತೇಕ ನಾಳೆ ಲೋಕಸಭೆಯಲ್ಲಿ ಪಾಸಾಗಲಿದೆ ಎನ್ನಲಾಗುತ್ತಿದೆ.

ವಾಜಪೇಯಿ ಕನಸು :
ಇನ್ನು, ಈ ಬಿಲ್ ಮಂಡನೆಗೂ ಮುನ್ನ ಮಾತನಾಡಿದ ಪ್ರಧಾನಿ ಮೋದಿ “ಹೊಸ ಸಂಸತ್ ಕಟ್ಟಡದಲ್ಲಿ ಈ ಐತಿಹಾಸಿಕ ಸಂದರ್ಭದಲ್ಲಿ, ಸದನದ ಮೊದಲ ಕಲಾಪವಾಗಿ, ಎಲ್ಲಾ ಸಂಸದರು ಮಹಿಳಾ ಶಕ್ತಿಗಾಗಿ ಹೆಬ್ಬಾಗಿಲುಗಳನ್ನು ತೆರೆಯುವ ಪ್ರಾರಂಭವನ್ನು ಈ ನಿರ್ಣಾಯಕ ನಿರ್ಧಾರದಿಂದ ಮಾಡಲಾಗುತ್ತಿದೆ. ಮಹಿಳೆಯರ ನೇತೃತ್ವದ ಅಭಿವೃದ್ಧಿಯ ನಮ್ಮ ಸಂಕಲ್ಪವನ್ನು ಮುಂದಕ್ಕೆ ತೆಗೆದುಕೊಂಡು, ನಮ್ಮ ಸರ್ಕಾರವು ಮಹತ್ವದ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತರುತ್ತಿದೆ ಎಂದು ಹೇಳಿದರು.
“ಈ ಮಸೂದೆಯು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಹಿಳೆಯರ ಸದಸ್ಯತ್ವವನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ. ‘ನಾರಿ ಶಕ್ತಿ ವಂದನ್ ಅಧಿನಿಯಮ್’ ನಮ್ಮ ಪ್ರಜಾಪ್ರಭುತ್ವವನ್ನು ಇನ್ನಷ್ಟು ಬಲಪಡಿಸುತ್ತದೆ” ಎಂದೂ ಅವರು ಹೇಳಿದರು.
“ಮಹಿಳಾ ಮೀಸಲಾತಿ ಮಸೂದೆಯ ಚರ್ಚೆ ಬಹಳ ಸಮಯದಿಂದ ನಡೆಯಿತು. ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತಾವಧಿಯಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಹಲವಾರು ಬಾರಿ ಮಂಡಿಸಲಾಯಿತು. ಆದರೆ ಮಸೂದೆಯನ್ನು ಅಂಗೀಕರಿಸಲು ಸಾಕಷ್ಟು ಬಹುಮತ ಇರಲಿಲ್ಲ, ಮತ್ತು ಈ ಕಾರಣದಿಂದಾಗಿ ಈ ಕನಸು ಅಪೂರ್ಣವಾಗಿ ಉಳಿಯಿತು’’ ಎಂದು ಮೋದಿ ಹೇಳಿದರು.

“ಇಂದು, ಇದನ್ನು ಮುಂದುವರಿಸಲು ದೇವರು ನನಗೆ ಅವಕಾಶವನ್ನು ನೀಡಿದ್ದಾನೆ. ನಮ್ಮ ಸರ್ಕಾರವು ಉಭಯ ಸದನಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಕುರಿತು ಇಂದು ಹೊಸ ಮಸೂದೆಯನ್ನು ತರುತ್ತಿದೆ” ಎಂದೂ ಪ್ರಧಾನಿ ಮೋದಿ ಹೇಳಿದ್ದಾರೆ.
ಮಸೂದೆಯಲ್ಲಿ ಏನಿದೆ ?
- ಲೋಕಸಭೆ (ಸಂಸತ್ತಿನ ಕೆಳಮನೆ), ವಿಧಾನ ಸಭೆಗಳು (ರಾಜ್ಯ ಶಾಸಕಾಂಗ ಸಭೆಗಳು), ಮತ್ತು ದೆಹಲಿ ಅಸೆಂಬ್ಲಿಯಲ್ಲಿ 1/3 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಬೇಕು.
- ಮಹಿಳೆಯರ ಕೋಟಾದಲ್ಲಿ 1/3ರಷ್ಟು ಮೀಸಲಾತಿ ಸೀಟುಗಳನ್ನು ST ಅಥವಾ SC ಸಮುದಾಯದವರಿಗೆ ಹಂಚಿಕೆ ಮಾಡಬೇಕು.
- ಡೀಲಿಮಿಟೇಶನ್ ವ್ಯಾಯಾಮದ ನಂತರ ಅನುಷ್ಠಾನವಾಗುತ್ತದೆ.
- ಮೀಸಲಾತಿಯು 15 ವರ್ಷಗಳವರೆಗೆ ಪರಿಣಾಮಕಾರಿಯಾಗಿರಲು ಪ್ರಸ್ತಾಪಿಸಲಾಗಿದೆ
