ನವದೆಹಲಿ: ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ವಿಚಾರವಾಗಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಭಾರತದ ವಿರುದ್ಧ ಆರೋಪ ಮಾಡಿರುವುದು, ಉಭಯ ದೇಶಗಳ ನಡುವಿನ ಸಂಬಂಧದ ಮೇಲೆ ಗಂಭೀರ ಪರಿಣಾಮ ಬೀರುವಂತಾಗಿದೆ.
ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ವಿಚಾರದಲ್ಲಿ ಭಾರತದ ಕೈವಾಡವಿದೆ ಎಂಬ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅವರ ಆರೋಪ ಇದೀಗ ಉಭಯ ದೇಶಗಳ ನಡುವಿನ ಸಂಬಂಧದ ಮೇಲೆ ಮಾರಕವಾಗಿ ಪರಿಣಮಿಸಿದೆ. ಟ್ರುಡೋ ಹೇಳಿಕೆ ಬೆನ್ನಲ್ಲೇ ಉಭಯ ದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಉಭಯ ದೇಶಗಳೂ ರಾಜತಾಂತ್ರಿಕರು ಮತ್ತು ಅಧಿಕಾರಿಗಳ ಉಚ್ಛಾಟನೆ ಮಾಡಿವೆ.
ತುರ್ತು ಅಧಿವೇಶನದಲ್ಲಿ ಹೇಳಿಕೆ :

ಜೂನ್ ತಿಂಗಳಲ್ಲಿ ಹತ್ಯೆಯಾಗಿದ್ದ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಟ್ರುಡೋ ಗಂಭೀರ ಅರೋಪ ಮಾಡಿದ್ದಾರೆ.
ಈ ಬಗ್ಗೆ ಅಲ್ಲಿನ ಸಂಸತ್‌ನಲ್ಲಿ ನಡೆದ ತುರ್ತು ಅಧಿವೇಶನದಲ್ಲಿ ಮಾತನಾಡಿದ್ದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ, ನಿಜ್ಜರ್ ಹತ್ಯೆ ಹಿಂದೆ ಭಾರತೀಯ ಏಜೆಂಟ್‌ಗಳ ಕೈವಾಡವಿದೆ ಅನ್ನೋದಕ್ಕೆ ನಮ್ಮ ಸರ್ಕಾರದ ಬಳಿ ಸಾಕ್ಷಿಗಳಿವೆ ಎಂದು ಹೇಳಿದ್ದಾರೆ.
ಜೊತೆಗೆ ನಮ್ಮ ನೆಲದ ಮೇಲೆ ನಡೆದ ಹತ್ಯೆಯಲ್ಲಿ ಬೇರೆ ದೇಶದ ಸರ್ಕಾರಗಳು ಭಾಗಿಯಾಗಿರೋದನ್ನು ಒಪ್ಪಿಕೊಳ್ಳೋಕೆ ಸಾಧ್ಯವಿಲ್ಲ. ಇದರಿಂದ ನಮ್ಮ ಸಾರ್ವಭೌಮತ್ವ ಹಾಗೂ ಪ್ರಜಾಪ್ರಭುತ್ವದ ನಿಯಮಗಳ ಉಲ್ಲಂಘನೆಯಾಗುತ್ತದೆ. ಅಲ್ಲದೆ ಇತ್ತೀಚೆಗೆ G20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿಯವರ ಬಳಿ ಈ ವಿಚಾರವನ್ನು ಪ್ರಸ್ತಾಪಿಸಿದ್ದೆ ಎಂದು ಟ್ರುಡೋ ಹೇಳಿದ್ದಾರೆ.
ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಸರ್ಕಾರ ಕಠಿಣ ನಿಲುವು ತಾಳಿದೆ. ಈ ಹಿನ್ನಲೆಯಲ್ಲಿ ಭಾರತದ ಹಿರಿಯ ಗುಪ್ತಚರ ಅಧಿಕಾರಿಯನ್ನ ಕೆನಡಾದಿಂದ ಉಚ್ಛಾಟನೆ ಮಾಡಲಾಗಿದೆ ಎಂದು ಕೆನಡಾ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಹೇಳಿದ್ದಾರೆ.

ಆಧಾರ ರಹಿತ ಆರೋಪ :
ಇತ್ತ ಕೆನಡಾದ ಆರೋಪಕ್ಕೆ ಭಾರತ ಪ್ರತಿಕ್ರಿಯಿಸಿದ್ದು, ಈ ಆರೋಪಗಳು ಆಧಾರರಹಿತ ಮತ್ತು ಉದ್ದೇಶಪೂರ್ವಕ ಅಂತ ತಿರಸ್ಕರಿಸಿದ್ದು ಮಾತ್ರವಲ್ಲದೇ ಕೆನಡಾದ ನಡೆಯನ್ನು ತೀವ್ರವಾಗಿ ಟೀಕಿಸಿರುವ ಭಾರತ, ಭಯೋತ್ಪಾದಕರಿಗೆ ಸಾರ್ವಜನಿಕವಾಗಿ ಸಿಂಪತಿ ತೋರಿಸೋದು ಕಳವಳಕಾರಿ ವಿಷಯ ಅಂತ ಹೇಳಿದೆ.
ಈ ರೀತಿ ಆಧಾರರಹಿತ ಆರೋಪ ಮಾಡುವ ಮೂಲಕ ಕೆನಡಾ ಖಲಿಸ್ತಾನಿ ಭಯೋತ್ಪಾದಕರು ಮತ್ತು ಉಗ್ರಗಾಮಿಗಳ ಮೇಲಿದ್ದ ಗಮನವನ್ನ ಬದಲಿಸಲು ಬಯಸುತ್ತಿದೆ. ಅಲ್ಲದೆ ಕೆನಡಾದಲ್ಲಿ ಆಶ್ರಯ ಪಡೆದಿರುವ ಈ ಉಗ್ರರಿಂದ ಭಾರತದ ಸಾರ್ವಭೌಮತೆಗೆ ಹಾಗೂ ಸಮಗ್ರತೆಗೆ ಬೆದರಿಕೆ ಹಾಕ್ತಿವೆ. ಆದರೆ ಕೆನಡಾ ಸರ್ಕಾರ ಈ ವಿಷಯದಲ್ಲಿ ಯಾವುದೇ ಕ್ರಮ ಕೈಗೊಳ್ಳದೆ ಸುಮ್ಮನೆ ಇರೋದು ಅತಿದೊಡ್ಡ ಕಳವಳದ ಸಂಗತಿ ಅಂತ ಭಾರತದ ವಿದೇಶಾಂಗ ಇಲಾಖೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಜೊತೆಗೆ ಕೊಲೆ, ಮಾನವ ಕಳ್ಳಸಾಗಣೆ ಮತ್ತು ಭಯೋತ್ಪಾದನೆಯಂತ ಕೃತ್ಯಗಳಿಗೆ ಕೆನಡಾದಲ್ಲಿ ಜಾಗ ನೀಡಲಾಗಿದೆ. ಕೂಡಲೇ ಎಲ್ಲಾ ರೀತಿಯ ಭಾರತ ವಿರೋಧಿ ಕೃತ್ಯಗಳನ್ನ ನಿಲ್ಲಿಸುವಂತೆ ಮಾಡ್ಬೇಕು. ಖಲಿಸ್ತಾನಿ ಉಗ್ರರ ವಿರುದ್ಧ ಶೀಘ್ರವೇ ಕ್ರಮ ಕೈಗೊಳ್ಳಬೇಕು ಎಂದು ಭಾರತ ಆಗ್ರಹಿಸಿದೆ. ಮಾತ್ರವಲ್ಲದೇ ಕೆನಡಾ ನಡೆಗೆ ಪ್ರತಿಯಾಗಿ ಭಾರತದಲ್ಲಿರುವ ಕೆನಡಾದ ಉನ್ನತದ ರಾಜತಾಂತ್ರಿಕ ಅಧಿಕಾರಿಯನ್ನು ಉಚ್ಛಾಟನೆ ಮಾಡಿದ್ದು, ಇನ್ನೈದು ದಿನದಲ್ಲಿ ದೇಶ ತೊರೆಯುವಂತೆ ಸೂಚಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಭಾರತ ವಿದೇಶಾಂಗ ಇಲಾಖೆ, ಭಾರತ ಸರ್ಕಾರದ ನಿರ್ಧಾರದ ಬಗ್ಗೆ ತಿಳಿಸಲು ಕೆನಡಾದ ಹೈ ಕಮಿಷನರ್ ಕ್ಯಾಮರಾನ್ ಮೆಕೇ ಅವರನ್ನು ಕರೆಸಲಾಗಿತ್ತು. ಈ ವೇಳೆ ಉಚ್ಛಾಟಿತ ಅಧಿಕಾರಿ 5 ದಿನದ ಒಳಗೆ ಭಾರತವನ್ನು ತೊರೆಯಬೇಕು ಎಂದು ತಿಳಿಸಲಾಗಿದೆ ಅಂತ ಹೇಳಿಕೆಯಲ್ಲಿ ತಿಳಿಸಿದೆ
