ವರದಿ: ಶಫೀ ಉಚ್ಚಿಲ
ಕಾಪು : ಚಂಡಮಾರುತದ ಆರ್ಭಟಕ್ಕೆ ಸಿಲುಕಿ ಅರಬ್ಬೀ ಸಮುದ್ರದಲ್ಲಿ ಮುಳುಗಿ ಪಡುಬಿದ್ರಿಯಲ್ಲಿ ಮೇಲಕ್ಕೆತ್ತಲ್ಪಟ್ಟ ಗುಜರಾತ್ ಮೂಲದ ಅಲಯನ್ಸ್ ಟಗ್ ಸಮುದ್ರದತ್ತ ವಾಲಿಕೊಂಡಿದ್ದು, ಇನ್ನೆರಡು ದಿನಗಳ ಕಾರ್ಯಾಚರಣೆ ನಡೆಯಲಿರುವುದಾಗಿ ಬದ್ರಿಯಾ ಕಂಪನಿಯ ಬಿಲಾಲ್ ಮೈದಿನ್ ತಿಳಿಸಿದ್ದಾರೆ.
ಮೇ 15 ರಂದು ಸಮುದ್ರದಲ್ಲಿ ಮುಳುಗಿ ಪಡುಬಿದ್ರಿ ಯಲ್ಲಿ ಪತ್ತೆಯಾಗಿದ್ದು, ಬಿಲಾಲ್ ನೇತ್ರತ್ವದ ಬದ್ರಿಯಾ ಹಾಗು ಯೋಜಕ ಕಂಪನಿಗಳ 5 ದಿನಗಳ ನಿರಂತರ ಪ್ರಯತ್ನದಿಂದ ಮಂಗಳವಾರ ಮೇಲಕ್ಕೆತ್ತುವಲ್ಲಿ ಯಶಸ್ಸು ಕಂಡಿದೆ. ಟಗ್ನಲ್ಲಿ ಓರ್ವ ಸಿಬ್ಬಂದಿಯ ಮೃತದೇಹ ಪತ್ತೆಯಾಗಿದೆ. ಟಗ್ನ ಒಳಭಾಗದಲ್ಲಿ ನೀರು ಮತ್ತು ಮರಳು ತುಂಬಿದ್ದು ದೇಹಗಳ ಶೋಧ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ನೀರು ಮತ್ತು ಮರಳು ಸಂಪೂರ್ಣ ತೆರವುಗೊಳಿಸಿ ಶೋಧ ಕಾರ್ಯಾಚರಣೆ ಮುಂದುವರಿಯಲಿದೆ.
ಮೇಲಕ್ಕೆತ್ತಪಟ್ಟ ಟಗ್ ಸಮುದ್ರದತ್ತ ವಾಲಿಕೊಂಡಿದ್ದು, ಸಂಪೂರ್ಣ ಸಿದ್ದತೆ ನಡೆಸದೆ ಹಾಗೇ ಎಳೆದೊಯ್ಯುವ ಸಾಹಸಕ್ಕಿಳಿದರೆ ಮತ್ತೆ ಸಮುದ್ರದ ಮಧ್ಯೆ ಅಪಾಯ ಸಂಭವಿಸುವ ಸಾಧ್ಯತೆ ಇದೆ.ಈ ನಿಟ್ಟಿನಲ್ಲಿ ಇದ್ದ ಸ್ಥಳದಲ್ಲೇ ಇನ್ನೆರಡು ದಿನಗಳ ಕಾಲ ಕಾರ್ಯಾಚರಣೆ ನಡೆಸಿ ಬಳಿಕ ಟಗ್ಗನ್ನು ಮಂಗಳೂರಿನ ಹಳೆ ಬಂದರಿಗೆ ಒಯ್ಯಲಾಗುವುದು ಎಂದು ಬಿಲಾಲ್ ತಿಳಿಸಿದ್ದಾರೆ.