ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ಅಕ್ರಮವಾಗಿ ಮನೆ ಕಟ್ಟಿ ಕುಳಿತವರಿಗೆ ಜಾಗದ ಹಕ್ಕುಪತ್ರ ನೀಡಲು 94ಸಿ ಅನ್ವಯ ಸರ್ಕಾರ 2022ನೇ ಇಸವಿಯ ವರೆಗೆ ಆದೇಶ ನೀಡಿದ್ದು, ಹೆಬ್ರಿಯ ಕೆಲವೆಡೆ ಅಕ್ರಮ ಸಕ್ರಮ ಮತ್ತು 94ಸಿ ಅರ್ಜಿಗಳನ್ನು ಡೀಮ್ಡ್ ಅರಣ್ಯ ಎಂದು ತಾತ್ಕಾಲಿಕವಾಗಿ ಮುಕ್ತಾಯಗೊಳಿಸಲಾಗಿದೆ ಎಂದು ಅರ್ಜಿದಾರರಿಗೆ ನೋಟಿಸ್ ನೀಡಿದ್ದು ಯಾರಿಗೂ ಅನ್ಯಾಯ ಆಗಬಾರದು. ಅವರು ವಾಸ ಮಾಡಿರುವ ಜಾಗದ ಹಕ್ಕುಪತ್ರ ನೀಡಬೇಕು. ನೋಟಿಸ್ ನ್ನು ಮರು ಪರಿಶೀಲನೆ ನಡೆಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ನೇತ್ರತ್ವದಲ್ಲಿ ಫಲಾನುಭವಿಗಳು ಮಂಗಳವಾರ ತಹಶೀಲ್ದಾರ್ ಪುರಂದರ ಕೆ. ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿ ಅವರು ಈ ಬಗ್ಗೆ ಗಮನ ನೀಡಬೇಕು. ಇಲ್ಲದಿದ್ದರೆ ತಾಲ್ಲೂಕು ಕಚೇರಿಗೆ ಮುಕ್ತಿಗೆ ಹಾಕುತ್ತೇವೆ. ಬಿಜೆಪಿಯವರು ಅವರಿಗೆ ಬೇಕಾದವರಿಗೆ ಹಕ್ಕುಪತ್ರ ಕೊಡಿಸುತ್ತಿದ್ದಾರೆ ಎಂದು ಮಂಜುನಾಥ ಪೂಜಾರಿ ದೂರಿದರು.
ಬಿಜೆಪಿಯವರಿಗೆ ಕೊರೊನ ಬರುವುದಿಲ್ಲವೆ …?

ಜಿಲ್ಲಾಧಿಕಾರಿಯವರ ಖಡಕ್ ಆದೇಶದ ಬಳಿಕವೂ ಜಿಲ್ಲೆಯಲ್ಲಿ ಶಾಸಕರು, ಸಚಿವರು 400, 500 ಮಂದಿಯನ್ನು ಸೇರಿಸಿ ಸಭೆ ನಡೆಸುತ್ತಾರೆ. ಅವರಿಗೆ ಒಂದು ನೀತಿ, ಜನಸಾಮಾನ್ಯರಿಗೆ ಒಂದು ನೀತಿಯೇ, ಕೊವೀಡ್‌ಗೆ ಸಂಬಂಧಿಸಿದ ಸಭೆ ನಡೆಸಲಿ. ಇತರ ಸಭೆ ನಡೆಸುವುದು ಯಾಕೆ? ಆಗ ಕೊರೊನ ಬರುವುದಿಲ್ಲವೆ ಎಂದು ಮಂಜುನಾಥ ಪೂಜಾರಿ ಪ್ರಶ್ನಿಸಿದರು.
ಜನರ ಹಕ್ಕು ಕಸಿಯಬೇಡಿ – ಸಾಧ್ಯವಾದರೆ ಸಹಾಯ ಮಾಡಿ
ಆಡಳಿತ ನಡೆಸುವವರು ಕೊರೊನದ ಹೆಸರಲ್ಲೂ ಹಣ ಮಾಡಿದ ಮೇಲೆ ಇನ್ನು ಜನರನ್ನು ಬಿಡುತ್ತಾರೆಯೇ, ಜನರ ಸಂಕಷ್ಟ ಅವರಿಗೆ ಗೊತ್ತಿಲ್ಲ. ಜನತೆಗೆ ಸಹಾಯ ಮಾಡುವಾಗ, ಹಕ್ಕುಪತ್ರ ಕೊಡುವಾಗ ಪಕ್ಷ ನೋಡಬೇಡಿ, ಅರ್ಹತೆ ನೋಡಿ ಕೊಡಿ, ಕೊರೊನದ ಸಂಕಷ್ಟದ ಕಾಲದಲ್ಲಿ ಹೆಬ್ರಿಯ ಹಲವು ಮಂದಿಗೆ ಕಂದಾಯ ಇಲಾಖೆ ನೋಟಿಸ್ ನೀಡಿರುವುದನ್ನು ಕಂಡರೆ ದು:ಖ ಆಗುತ್ತಿದೆ. ಜಮೀನಿನ ವಿಚಾರದಲ್ಲಿ ಜನರಿಗೆ ಅನ್ಯಾಯವಾದರೆ ತೀವ್ರ ಹೋರಾಟ ನಡೆಸುತ್ತೇವೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ತಿಳಿಸಿದರು.
ನೋಟಿಸ್ ಪಡೆದ ಹಲವರ ಪೈಕಿ ಬಲ್ಲೆಮನೆ ಸುಧಾಕರ ಶೆಟ್ಟಿ ಮಾತನಾಡಿ, ದಯಮಾಡಿ ನಮಗೆ ಹಕ್ಕುಪತ್ರ ನೀಡಿ, ನಮ್ಮ ಹಕ್ಕು ಕಸಿಯಬೇಡಿ ಎಂದು ತಹಶೀಲ್ದಾರ್ ಅವರಲ್ಲಿ ಮನವಿ ಮಾಡಿದರು.

ಈ ಸಂದರ್ಭ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕಬ್ಬಿನಾಲೆ ರಂಜನಿ ಹೆಬ್ಬಾರ್, ಕಾಂಗ್ರೆಸ್ ವಿವಿಧ ಘಟಕಗಳ ಪ್ರಮುಖರಾದ ಲಕ್ಷ್ಮಣ ಆಚಾರ್, ಶಿವರಾಮ ಪೂಜಾರಿ, ಶಶಿಕಲಾ ಡಿ.ಪೂಜಾರಿ, ಎಚ್.ಬಿ.ಸುರೇಶ್, ಎಚ್.ಜನಾರ್ಧನ್, ಕನ್ಯಾನ ಸಂತೋಷ ನಾಯಕ್, ಅಶ್ವಿನಿ ಮುದ್ರಾಡಿ, ಮುನಿಯಾಲು ಉದಯ ನಾಯ್ಕ್, ನಾಗರಾಜ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು