ಹಾವೇರಿ : ದನ ಮೇಯಿಸಲು ಬಂದಿದ್ದ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಇಬ್ಬರು ಕಾಮುಕರನ್ನು ಎಮ್ಮೆ ಅಟ್ಟಾಡಿಸಿಕೊಂಡು ಹೋಗುವ ಮೂಲಕ ಮಹಿಳೆಯನ್ನು ರಕ್ಷಿಸಿರುವ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಹಿರೇಮರಳಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಆರೋಪಿಗಳನ್ನು ಹಿರೇಮರಳಿಹಳ್ಳಿ ಗ್ರಾಮದ ಪರಶುರಾಮ ತಮ್ಮಣ್ಣ ಹಟ್ಟಿ ಹಾಗೂ ಬಸವರಾಜ ಗಾಳೆಪ್ಪ ದಂಡಿನ್ ಎಂದು ಗುರುತಿಸಲಾಗಿದೆ. ಸಂತ್ರಸ್ತ ಮಹಿಳೆಯು ಹಿರೇಮರಳಿಹಳ್ಳಿ ಗ್ರಾಮದ ನೀಲಗಿರಿ ತೋಪಿನಲ್ಲಿ ದನ ಮೇಯಿಸುತ್ತಿದ್ದಾಗ ಬಸವರಾಜ ಅಸಭ್ಯವಾಗಿ ವರ್ತಿಸಿದ್ದಾನೆ.
ಈತನಿಂದ ತಪ್ಪಿಸಿಕೊಂಡು ಹೋಗುತ್ತಿದ್ದ ಮಹಿಳೆಗೆ ಇನ್ನೋರ್ವ ಆರೋಪಿ ಪರಶುರಾಮ ಎದುರಿನಿಂದ ಬಂದು ಹಲ್ಲೆ ನಡೆಸಿದ್ದು,ಅಲ್ಲದೆ ಪ್ರತಿರೋಧ ತೋರಿದ ಮಹಿಳೆಯ ಕತ್ತನ್ನು ಹಿಸುಕಿ ಕೊಲೆಗೆ ಯತ್ನಿಸಿದ್ದಾರೆ. ಮಹಿಳೆ ಚೀರಾಡುತ್ತಿರುವುದನ್ನು ಗಮನಿಸಿದ ಎಮ್ಮೆ, ಅತ್ಯಾಚಾರಿಗಳಿಂದ ಸಂಕಷ್ಟ ಎದುರಿಸುತ್ತಿದ್ದಾಳೆ ಎಂದು ಓಡಿಬಂದು ಆರೋಪಿಯಲ್ಲೊಬ್ಬನನ್ನು ಅಟ್ಟಾಡಿಸಿಕೊಂಡು ಹೋಗಿದೆ.
ಮಹಿಳೆ ಇನ್ನೋರ್ವ ಆರೋಪಿಯಿಂದ ತಪ್ಪಿಸಿಕೊಂಡು ಓಡಿಹೋಗುವ ಸಂದರ್ಭದಲ್ಲಿ ಎಮ್ಮೆ ಇಬ್ಬರು ಆರೋಪಿಗಳ ಬೆನ್ನಟ್ಟಿ ಹೋಗಿದೆ. ಪ್ರಾಣಾಪಾಯದಿಂದ ಪಾರಾಗಿ ಬಂದ ಮಹಿಳೆಯು ಹಿರೇಮರಳಿಹಳ್ಳಿ ಗ್ರಾಮಸ್ಥರಿಗೆ ನಡೆದ ಘಟನೆಯನ್ನು ವಿವರಿಸಿದ್ದು ಸವಣೂರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ. ಆರೋಪಿ ಪರಶುರಾಮ ಹಟ್ಟಿಯನ್ನು ಪೋಲಿಸರು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ಬಸವರಾಜ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
