ಕಾಪು : ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರ ಬಲಾಯಿಪಾದೆ ಜಂಕ್ಷನ್ ಬಳಿ ಬುಧವಾರ ಮುಂಜಾನೆ ಟ್ಯಾಂಕರ್ ನ ಹಿಂಬದಿಗೆ ಕಾರು ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಮೂಲ್ಕಿ ಗೃಹರಕ್ಷಕ ದಳದ ಸಿಬ್ಬಂದಿ ರಾಕೇಶ್ ಕುಬೆವೂರು (27) ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಅವರು ಮಂಗಳವಾರ ರಾತ್ರಿ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ರಾತ್ರಿ ಪಾಳಿಯ ಕರ್ತವ್ಯ ನಿರ್ವಹಿಸಿ, ಬುಧವಾರ ಮುಂಜಾನೆ ಉಡುಪಿಯಲ್ಲಿರುವ ತಂಗಿಯ ಮನೆಗೆ ತೆರಳುತ್ತಿದ್ದಾಗ ಕಾರು, ಟ್ಯಾಂಕರ್ ಗೆ ಹಿಂಬದಿಯಿಂದ ಢಿಕ್ಕಿ ಹೊಡೆದಿತ್ತು.

ಢಿಕ್ಕಿಯ ರಭಸಕ್ಕೆ ತಲೆಗೆ ಗಂಭೀರ ಗಾಯಗೊಂಡಿದ್ದ ಗಾಯಾಳು ರಾಕೇಶ್ ಅವರನ್ನು ಸ್ಥಳೀಯರು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಮೂಲ್ಕಿ ತಾಲೂಕಿನ ಕಿಲ್ಪಾಡಿ ಕುಬೆವೂರು ನಿವಾಸಿಯಾಗಿದ್ದ ರಾಕೇಶ್ ಅವರು ಅವಿವಾಹಿತರಾಗಿದ್ದು, ತಾಯಿಯ ಜೊತೆಗೆ ವಾಸವಿದ್ದರು.ಮೂಲ್ಕಿ ಗೃಹ ರಕ್ಷಕದಳದ ಸಕ್ರಿಯ ಮತ್ತು ನಿಷ್ಟಾವಂತ ಸಿಬಂದಿಯಾಗಿದ್ದ ಅವರು ಮೂಲ್ಕಿ ಪೊಲೀಸ್ ಠಾಣೆಯ ಪೊಲೀಸರೊಂದಿಗೆ ಕರ್ತವ್ಯ ನಿರ್ವಹಿಸುತ್ತಿದ್ದರು. ಗೃಹರಕ್ಷಕ ದಳದ ಸೇವೆಯ ಜೊತೆಗೆ, ಬಿಡುವಿನ ವೇಳೆಯಲ್ಲಿ ವಾಹನದಲ್ಲಿ ಬಾಡಿಗೆ ನಡೆಸುತ್ತಿದ್ದರು.
