ಜನಸಾಮಾನ್ಯರಲ್ಲಿ ಕಾನೂನಿನ ಜಾಗೃತಿ ಮೂಡಿಸಿ, ರಾಜಿ ಸಂಧಾನಕ್ಕೆ ಒತ್ತು ನೀಡಿ : ನ್ಯಾಯಾಧೀಶೆ ಶರ್ಮಿಳಾ
Published
0
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಹುಟ್ಟಿನಿಂದ ಸಾವಿನವರೆಗೆ ಕಾನೂನಿನ ಚೌಕಟ್ಟಿನಲ್ಲಿಯೇ ಬದುಕುವ ನಮಗೆ ಕಾನೂನಿನ ಸಾಮಾನ್ಯ ಜ್ಞಾನ ಇರಲೇ ಬೇಕು ಎಂದು ಉಡುಪಿ ಸಿವಿಲ್ ನ್ಯಾಯಾಲಯದ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಶರ್ಮಿಳಾ ಎಸ್ ಹೇಳಿದರು. ಬ್ರಹ್ಮಾವರದ ಸಿಟಿ ಸೆಂಟರ್ನ ಮಿನಿ ಸಭಾ ಭವನದಲ್ಲಿ ಭಾನುವಾರ ಜಿಲ್ಲಾ ಆರ್.ಟಿ.ಐ ಮತ್ತು ಸಾಮಾಜಿಕ ಕಾರ್ಯಕರ್ತರ ಹೋರಾಟ ವೇದಿಕೆ ವತಿಯಿಂದ ನಡೆದ ಮಾಹಿತಿ ಹಕ್ಕು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಕರಣಗಳು ನ್ಯಾಯಾಲಯಕ್ಕೆ ಹೋಗುವ ಮೊದಲೇ ರಾಜಿ ಸಂಧಾನದ ಮೂಲಕ ಇತ್ಯರ್ಥ ಗೊಳಿಸಲು ನಾವೆಲ್ಲ ಪ್ರಯತ್ನಿಸಬೇಕು. ದಿನನಿತ್ಯ ವ್ಯವಹಾರಕ್ಕೆ ಬೇಕಾಗುವ ಕಾನೂನಿನ ಹಕ್ಕು ಮತ್ತು ಕರ್ತವ್ಯಗಳ ಮಾಹಿತಿಗಳನ್ನು ಜನಸಾಮಾನ್ಯರಿಗೆ ತಿಳಿಸಿಕೊಡುವ ಪ್ರಯತ್ನ ಇಂತಹ ಕಾರ್ಯಾಗಾರಗಳಿಂದ ಆಗುತ್ತಿರುವುದು ಶ್ಲಾಘನೀಯ ಎಂದರು. ಕಾನೂನಿನ ಬಗ್ಗೆ ಪರಿಶಿಷ್ಟ ಪಂಗಡ, ಜಾತಿ, ಬಡವರಿಗೆ ಮತ್ತು ಮಹಿಳೆಯರಿಗೆ ಹೆಚ್ಚು ಮಾಹಿತಿ ನೀಡುವ ಕಾರ್ಯಕ್ರಮಗಳಾಗಬೇಕು ಎಂದು ಅವರು ಹೇಳಿದರು.
ಬ್ರಹ್ಮಾವರದ ತಹಶೀಲ್ದಾರ್ ರಾಜಶೇಖರ ಮೂರ್ತಿ ಕಂದಾಯ ಮಾಹಿತಿ ಹಕ್ಕು ಕಾನೂನು ಮತ್ತು ಪಂಚಾಯತ್ ರಾಜ್ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿ, ದೇಶದಲ್ಲಿ ಆರ್.ಟಿ.ಐ ಹಕ್ಕು ಆರಂಭವಾದ ದಿನಗಳಿಂದ ಸುಮಾರು ೧೭ ಕೋಟಿ ೫೦ ಲಕ್ಷ ಅರ್ಜಿಗಳು ದಾಖಲಾಗಿದ್ದವು. ಅದೇ ರೀತಿ ೩ಸಾವಿರಕ್ಕಿಂತಲೂ ಅಧಿಕ ಕಾರ್ಯಕರ್ತರ ಹತ್ಯೆಯೂ ಕೂಡಾ ಆಗಿದೆ. ಉಡುಪಿ ಜಿಲ್ಲೆಯಲ್ಲಿ ಮಾತ್ರ ಇಂತಹ ಮಾಹಿತಿ ಹಕ್ಕು ಕಾರ್ಯಾಗಾರ ಆಗುತ್ತಿದ್ದು, ಜನ ಸಾಮಾನ್ಯರು ತಮ್ಮ ಹಕ್ಕುಗಳನ್ನು ತಿಳಿಯುವ ಮತ್ತು ಪಡೆಯುವ ಬಗ್ಗೆ ಜಾಗೃತರಾಗಬೇಕು ಎಂದು ಹೇಳಿದರು.
ಬ್ರಹ್ಮಾವರದ ಉದ್ಯಮಿ ಚಂದ್ರಶೇಖರ ಶೆಟ್ಟಿ, ಉಡುಪಿ ವಕೀಲರ ಸಂಘದ ಅಧ್ಯಕ್ಷ ನಾಗರಾಜ ಗಾಣಿಗ ಬ್ರಹ್ಮಾವರ, ವೇದಿಕೆಯ ಸದಾಶಿವ ಶೆಟ್ಟಿ, ಸಂಚಾಲಕ ಬಾರ್ಕೂರು ಸತೀಶ್ ಪೂಜಾರಿ ಉಪಸ್ಥಿತರಿದ್ದರು.