ಸಾಹಿತ್ಯ

ರಾಜೇಶ್ ಭಟ್ ಪಣಿಯಾಡಿ ಲೇಖನ : ದುಷ್ಟ ಶಕ್ತಿಗಳ ವಿರುದ್ಧ ಜಯ ಸಾಧಿಸುವ ಹಬ್ಬ “ವಿಜಯ ದಶಮಿ”

0

ರಾಜೇಶ್ ಭಟ್ ಪಣಿಯಾಡಿ

ಯಾ ದೇವೀ ಸರ್ವಭೂತೇಷು ಲಕ್ಷ್ಮೀ ರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋನಮಃ

ಆಶ್ವೀಜ ಮಾಸ ಶುಕ್ಲ ಪಕ್ಷದ ದಶಮಿ ತಿಥಿಯನ್ನು ವಿಜಯದಶಮಿ ಎಂದು ಕರೆಯಲಾಗುತ್ತದೆ. ನವರಾತ್ರಿಯ ಪ್ರತೀ ಮೂರು ಮೂರು ದಿನಗಳಲ್ಲಿ ಮಹಾಕಾಳಿ ಮಹಾಲಕ್ಷ್ಮಿ ಮಹಾಸರಸ್ವತಿ ದುರ್ಗೆಯರನ್ನು ಕಲಶ ಅಥವಾ ಸರಸ್ವತಿಯನ್ನು ಪುಸ್ತಕ ರೂಪದಲ್ಲಿ ಪೂಜಿಸಿದ್ದು ಹತ್ತನೇ ದಿನ ಆ ಕಲಶ ಅಥವಾ ಪುಸ್ತಕ ಪೀಠವನ್ನು ಶ್ರವಣಾ ನಕ್ಷತ್ರದ ಶುಭ ಘಳಿಗೆಯಲ್ಲಿ ಭಕ್ತಿಶ್ರದ್ದೆಯಿಂದ ಶೋಢಶೋ ಪಚಾರ ಮುಖೇನ ಪೂಜೆಯನ್ನು ಸಲ್ಲಿಸಿ ವಿಸರ್ಜಿಸಲಾಗುತ್ತದೆ. ವಿಸರ್ಜಿತ ಕಲಶದ ತೀರ್ಥವನ್ನು ಮನೆಯ ಎಲ್ಲಾ ಕಡೆ ಪ್ರೋಕ್ಷಣೆ ಮಾಡಬೇಕು. ಇದರಿಂದ ದುಷ್ಟಶಕ್ತಿಗಳು ದೂರವಾಗುತ್ತವೆ. ಹಾಗೆಯೇ ಪೂಜೆಗಿಟ್ಟ ಪುಸ್ತಕಗಳನ್ನು ಪಠಿಸಬೇಕು. ವಾದ್ಯ ಸಲಕರಣೆಗಳಿದ್ದರೆ ನುಡಿಸಬೇಕು. ಇದರಿಂದ ಆ ವಿಷಯದಲ್ಲಿ ಸಿದ್ಧಿ ದೊರೆಯುವುದು.
ಇನ್ನು ವಿಜಯದಶಮಿ ಎಂದರೆ ಕೆಟ್ಟ ಶಕ್ತಿಗಳ ಮೇಲೆ ವಿಜಯ ಸಾಧಿಸುವುದು ಎಂದರ್ಥ. ಈ ದಿನ ಒಳ್ಳೆಯ ವಿಚಾರಗಳ ಬಗ್ಗೆ ಸಂಕಲ್ಪ ಮಾಡುವ ದಿನ. ಈ ದಿನ ದೇವರನ್ನು ಪ್ರಾರ್ಥಿಸಿ ಯಾವುದೇ ಸಂಕಲ್ಪ ಮಾಡಿದರೂ ಅದರಿಂದ ಖಂಡಿತವಾಗಿ ವಿಜಯ ದೊರೆಯುತ್ತದೆ ಎಂಬ ನಂಬಿಕೆ ಇದೆ. ಈ ದಿನ ಬನ್ನಿ ಅಥವಾ ಶಮಿ, ಮಂದಾರ ವೃಕ್ಷಗಳ ಆರಾಧನೆಗೆ ವಿಶೇಷ ಮಹತ್ವವಿದೆ.
ರಾಮ ಲಂಕೆಯ ಮೇಲೆ ಯುದ್ಧಕ್ಕೆ ಹೊರಡುವ ಮುನ್ನ ಇದೇ ದಿನ ಶಮಿ ವೃಕ್ಷಕ್ಕೆ ವಂದಿಸಿ ಸಂಕಲ್ಪ ಮಾಡಿದ್ದನಂತೆ. ಮತ್ತು ಇದೇ ದಿನ ರಾವಣನ ಸಂಹಾರ ಮಾಡಿ ವಿಜಯ ಸಾಧಿಸಿದ್ದನಂತೆ.
ದಸರಾ’ ವಿಜಯದ ಹಬ್ಬವಾಗಿರುವುದರಿಂದ ಇದು ವಿಜಯದ, ಪರಾಕ್ರಮದ ಹಬ್ಬವಾಗಿದೆ.
ಪಾಂಡವರು ವನವಾಸಕ್ಕೆ ಹೋಗುವಾಗ ಶಮಿವೃಕ್ಷದ ಪೊಟರೆಯಲ್ಲಿ ಶಸ್ತ್ರಗಳನ್ನು ಇಟ್ಟಿದ್ದರು ಎಂದು ಹೇಳಲಾಗುತ್ತದೆ.
ಅರ್ಜುನನು ಅಜ್ಞಾತವಾಸದಲ್ಲಿ ಶಮಿಯ ಉಡಿಯಲ್ಲಿ ಇಟ್ಟ ಶಸ್ತ್ರಗಳನ್ನು ತೆಗೆದು, ವಿರಾಟನ ಗೋವುಗಳನ್ನು ಸೆರೆ ಹಿಡಿದ ಕೌರವಸೈನ್ಯದ ಮೇಲೆ ಆಕ್ರಮಣ ಮಾಡಿ ಇದೇ ದಿನ ವಿಜಯವನ್ನು ಸಂಪಾದಿಸಿದ್ದನು ಎಂದು ನಂಬಲಾಗುತ್ತದೆ. ಈ ಎಲ್ಲ ಘಟನೆಗಳ ಸಂಕೇತವಾಗಿಯೂ ಈ ದಿನಕ್ಕೆ ವಿಜಯದಶಮಿ ಎಂದು ಹೆಸರು ಬಂದಿದೆ.
ಪ್ರಾರಂಭದ ಕಾಲದಲ್ಲಿ ಇದು ಕೃಷಿಗೆ ಸಂಬಂಧಪಟ್ಟ ಒಂದು ಲೋಕೋತ್ಸವ ವಾಗಿತ್ತು. ಮಳೆಗಾಲದಲ್ಲಿ ಬಿತ್ತಿದ ಪ್ರಥಮ ಪೈರು ಮನೆಗೆ ಬಂದಾಗ ರೈತರು ಈ ಉತ್ಸವ ವನ್ನು ಆಚರಿಸುತ್ತಿದ್ದರು. ಈ ಕ್ರಮ ಈಗಲೂ ಚಾಲ್ತಿಯಲ್ಲಿದೆ. ಕರಾವಳಿ ಜಿಲ್ಲೆಗಳಲ್ಲಿ ಮನೆ ಮನೆಗಳಲ್ಲಿ ಹೆಚ್ಚಾಗಿ ಈ ದಿನ ಅಥವಾ ನವರಾತ್ರಿಯ ದಿನಗಳಲ್ಲಿ ಈ ಕೊರಳು ಕಟ್ಟುವ ಹಬ್ಬ ಆಚರಿಸುತ್ತಾರೆ. ವಿಜಯದಶಮಿಯಂದು ಯಾವುದೇ ಕೆಲಸ ಕಾರ್ಯಗಳಿಗೆ ಗ್ರಹಗತಿಗಳ ಸಮಯ ನೋಡಬೇಕಾಗಿಲ್ಲ. ಎಲ್ಲ ಕಾರ್ಯಗಳಿಗೂ ಇದು ಸೂಕ್ತ ಕಾಲ. ಮನೆಯ ತುಳಸಿ ಕಟ್ಟೆಯ ಮುಂದೆ ಮಣೆಯ ಮೇಲೆ ಮೊರ ಇಟ್ಟು ಅದರಲ್ಲಿ ಹೊಸ ತರಕಾರಿ, ಭತ್ತದ ಕೊರಳು, ಬಾಂದಳ, ದಡ್ಡಲ್, ಜೋಡುತೆಂಗಿನಕಾಯಿ, ಬಿದರಿನ, ಮಾವಿನ, ಹಲಸಿನ ಎಲೆಗಳನ್ನು ಇಟ್ಟು ದೇವರ ವಿಗ್ರಹ ಅಥವಾ ಶಾಲಗ್ರಾಮ ವನ್ನು ಅದರಲ್ಲಿ ಇಟ್ಟು ಚಿನ್ನದ ಆಭರಣ, ಹೂವು ಇತ್ಯಾದಿಗಳಿಂದ ಅಲಂಕರಿಸಿ ಸೌಭಾಗ್ಯಲಕ್ಷ್ಮಿಯನ್ನು ಆಹ್ವಾನಿಸಿ ಪೂಜಿಸಿ ತಂಬೇರು ಎರೆದು ತದನಂತರ ತಲೆಯ ಮೇಲೆ ಹೊತ್ತು ತಂದ ಮನೆಯ ಯಜಮಾನನನ್ನು ಮನೆಯ ಸುಮಂಗಲಿಯರು ಮಂಗಳವಾದ್ಯಗಳೊಡನೆ ಬರ ಮಾಡಿಕೊಂಡು ಶ್ರೀದೇವರ ಸನ್ನಿಧಿಯಲ್ಲಿಟ್ಟು ಮತ್ತೊಮ್ಮೆ ನಾರಾಯಣನ ಜೊತೆ ಪೂಜಿಸಿ ಪ್ರಾರ್ಥಿಸಿ ವಿಸರ್ಜಿಸಿ ಮನೆಯ ಎಲ್ಲಾ ಕಡೆ, ದೇವರ ಗುಡಿಗೆ, ಬೆಲೆ ಬಾಳುವ ವಸ್ತುಗಳಿಗೆ, ಮತ್ತು ಮನೆಗೆ ಸಂಬಂಧ ಪಟ್ಟ ಸ್ಥಳಗಳಲ್ಲಿ ಅದನ್ನೆಲ್ಲ ವನ್ನು ಜೋಡಿಸಿ ಕಟ್ಟಿದ ಕಟ್ಟುಗಳನ್ನು ಕಟ್ಟಿ ಲಕ್ಷ್ಮಿ ಮನೆಯಲ್ಲಿ ಸ್ಥಿರವಾಗಿ ಇರುವಂತೆ ಮಾಡುತ್ತಾರೆ. ಕಾರಣ ಆ ಧಾನ್ಯದ ತೆನೆ ಅಥವಾ ಕೊರಳಿನಲ್ಲಿ ಲಕ್ಷ್ಮೀ ಸನ್ನಿಧಾನ ಇರುವುದಂತೆ. ಮತ್ತು ಅದೇ ಕೊರಳಿನ ಭತ್ತವನ್ನು ಸುಲಿದ ಅಕ್ಕಿಯ ಕಾಳುಗಳನ್ನು ಅನ್ನಕ್ಕೆ ಬೆರೆಸಿ ಹೊಸದು ಊಟ ಮಾಡುವ ಪದ್ಧತಿ ನಮ್ಮಲ್ಲಿ ಇದೆ. ಕ್ರಿಶ್ಚಿಯನ್ನರು ಕೂಡ ಈ ಕೊರಳು ಹಬ್ಬವನ್ನು ತೆನೆ ಹಬ್ಬ ಎಂದು ಆಚರಿಸುತ್ತಾರಂತೆ.
ಇನ್ನು ವಿಜಯದಶಮಿ ಅಥವಾ ದಸರಾದಂದು ಅಪರಾಜಿತಾ ಪೂಜೆ ಮಾಡಲಾಗುತ್ತದೆ. ‘ಅಪರಾಜಿತಾ’ ಈ ದುರ್ಗಾದೇವಿಯ ಮಾರಕ ರೂಪವು ಪೃಥ್ವಿತತ್ತ್ವದ ಆಧಾರದ ಮೇಲೆ ಭೂಗರ್ಭದಿಂದ ಪ್ರಕಟವಾಗಿ ಪೃಥ್ವಿಯ ಮೇಲಿನ ಜೀವಗಳಿಗೆ ಕಾರ್ಯ ಮಾಡುತ್ತದೆ.
ಅಷ್ಟದಳದ ಸಿಂಹಾಸನದ ಮೇಲೆ ಆರೂಢಳಾದ ಈ ತ್ರಿಶೂಲಧಾರಿ ರೂಪವು ಶಿವನ ಸಂಯೋಗದಿಂದ ದಿಕ್ಪಾಲ ಹಾಗೂ ಗ್ರಹ ದೇವತೆ ಇವರ ಸಹಾಯದಿಂದ ಅಸುರೀ ಶಕ್ತಿಗಳನ್ನು ನಾಶ ಮಾಡುತ್ತದೆ.
ಅಪರಾಜಿತಾ ಈ ದುರ್ಗಾದೇವಿಯ ಮಾರಕ ರೂಪವು ಪೃಥ್ವಿತತ್ತ್ವದ ಆಧಾರದಲ್ಲಿ ಅಷ್ಟಪಾಲಕರ ಮಾಧ್ಯಮದಿಂದ ಅಷ್ಟದಿಕ್ಕುಗಳಿಗೆ ನಸುಗೆಂಪು ಬಣ್ಣದ ಪ್ರಕಾಶ ಲಹರಿಗಳಿಂದ ಪ್ರಕ್ಷೇಪಿತವಾಗಿ ಆಯಾ ಕೋನಗಳಲ್ಲಿ ಸಂಪುಟಿತವಾಗಿರುವ ರಜ-ತಮಾತ್ಮಕ ಶಕ್ತಿಯನ್ನು ನಾಶ ಮಾಡುತ್ತವೆ ಮತ್ತು ಪೃಥ್ವಿಯ ಮೇಲಿನ ಜೀವಗಳಿಗೆ ನಿರ್ವಿಘ್ನವಾಗಿ ಜೀವನ ನಡೆಸಲು ಅನುಕೂಲವಾಗುವಂತೆ ವಾಯು ಮಂಡಲದ ಶುದ್ಧಿಯನ್ನು ಮಾಡುತ್ತವೆ ಎನ್ನುತ್ತಾರೆ.

Advertisement. Scroll to continue reading.

ಇನ್ನು ಈ ವಿಜಯದಶಮಿ ನವರಾತ್ರಿಗಳಲ್ಲಿ ಲೋಕ ಕಂಟಕರಾದ ಎಲ್ಲಾ ಖಳ ರಾಕ್ಷಸರನ್ನು ಸಂಹರಿಸಿ ದೇವತೆಗಳಿಗೆ ಹಾಗೂ ಎಲ್ಲಾ ಜೀವರಾಶಿಗಳಿಗೆ ಸುಭಿಕ್ಷೆಯನ್ನು ಮಾತೆ ದಯಪಾಲಿಸಿದ ಪರ್ವದಿನ.
ಕಲಿಯುಗದಲ್ಲಿ ಈ ನವರಾತ್ರಿಯಲ್ಲಿ ಶಕ್ತಿದೇವತೆಗಳನ್ನು ಭಕ್ತಿ ಶ್ರದ್ದೆಯಿಂದ ಆರಾಧಿಸುವುದರ ಮೂಲಕ ಕಾಮ್ರ ಕ್ರೋಧ, ಲೋಭ, ಮದ, ಮಾತ್ಸರ್ಯ ಹಾಗೂ ಅಹಂಕಾರಗಳೆಂಬ ನಮ್ಮ ದೇಹದಲ್ಲಿ ಅಡಗಿದ ಷಡ್ವೈರಿಗಳ ಮೇಲೆ ವಿಜಯ ಸಾಧಿಸುವ ದಿನವೇ ವಿಜಯದಶಮಿ ಎಂದರೆ ತಪ್ಪಾಗಲಾರದು.
ಈ ವಿಜಯದಶಮಿ ನವದುರ್ಗೆಯರನ್ನು ಆರಾಧಿಸಿದ, ಸಂಭ್ರಮದಿಂದ, ಸಂಭ್ರಮದಲ್ಲಿ ಪಾಲ್ಗೊಂಡ ಎಲ್ಲ ಭಕ್ತರ ಎಲ್ಲ ದುರಿತಗಳನ್ನು ನಾಶ ಮಾಡಿ ಪ್ರತಿಯೊಂದು ಕಾರ್ಯದಲ್ಲೂ ವಿಜಯವನ್ನು ದಯ ಪಾಲಿಸುವ ಹಬ್ಬವಾಗಲಿ ಎಂದು
” ನಮೋ ದೇವ್ಯೈ ಮಹಾದೇವ್ಯೈ ಶಿವಾಯ್ಯೈ ಸತತಂ ನಮಃ ನಮಃ ಪ್ರಕೃತಿಯ್ಯೈ ಭದ್ರಾಯ್ಯೈ ನಿಯತಾಂ ಪ್ರಣತಾತ್ಮತಾಂ ಸರ್ವಮಂಗಲ ಮಾಂಗಲ್ಯೇ ಶಿವೇ ಸವಾರ್ಥಸಾಧಿಕೇ ಶರಣ್ಯೇ ತ್ರ್ಯಂಬಕೇ ದೇವಿ ನಾರಾಯಣೀ ನಮೋಸ್ತುತೇ ಎಂದು ಎಲ್ಲರಿಗೂ ಶುಭವನ್ನು ಹಾರೈಸೋಣ.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com